
ಚಿತ್ರದುರ್ಗ, 26 ಜುಲೈ (ಹಿ.ಸ.):
ಆ್ಯಂಕರ್:
ದಿವಂಗತ ಮಾಜಿ ಸಚಿವ ಡಿ. ಸುಧಾಕರ್ ಅವರು ಹಿರಿಯೂರು ಕ್ಷೇತ್ರದ 14 ಕೆರೆಗಳಿಗೆ ನೀರು ತುಂಬಿಸಬೇಕೆಂದುಕೊಂಡಿದ್ದ ಮಹತ್ವಾಕಾಂಕ್ಷೆಯ ಕನಸನ್ನು ನಾವೆಲ್ಲರೂ ನನಸು ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಹಿರಿಯೂರಿನ ನೆಹರೂ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಧಾಕರ್ ಅವರ ಕೊನೆಯ ಆಸೆಯಂತೆ ಈ ಭಾಗದ ನೀರಾವರಿ ಯೋಜನೆಗಾಗಿ ಸಚಿವ ಸಂಪುಟ ಸಭೆಯಲ್ಲಿ 244 ಕೋಟಿ ರೂ. ಮೊತ್ತದ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ನೀತಿಯ ರಾಜಕಾರಣಿ ಸುಧಾಕರ್:
ಡಿ. ಸುಧಾಕರ್ ಅವರನ್ನು ತಮ್ಮ ಆತ್ಮೀಯ ಸ್ನೇಹಿತ ಹಾಗೂ ಕುಟುಂಬದ ಸದಸ್ಯ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಅವರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ, ಬದಲಿಗೆ ಮಾನವ ಧರ್ಮ ಮತ್ತು ನೀತಿಯನ್ನು ನಂಬಿ ರಾಜಕಾರಣ ಮಾಡಿದವರು ಎಂದು ಶ್ಲಾಘಿಸಿದರು. ಎಸ್.ಎಂ. ಕೃಷ್ಣ ಹಾಗೂ ಬಂಗಾರಪ್ಪ ಅವರ ಕಾಲದಿಂದಲೂ ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸಿದ್ದ ಅವರು, ಚಿತ್ರದುರ್ಗ ಜಿಲ್ಲೆಯನ್ನು ಶಾಂತಿಯ ತೋಟವನ್ನಾಗಿ ರೂಪಿಸಿದ್ದರು ಎಂದು ಬಣ್ಣಿಸಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸಿನ ಹೆಮ್ಮೆ:
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್, ಐದು ಬೆರಳು ಸೇರಿ ಹೇಗೆ ಮುಷ್ಠಿಯಾಗುತ್ತದೆಯೋ, ಹಾಗೆಯೇ ನಮ್ಮ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಬಡವರ ಬದುಕಿಗೆ ಆಸರೆಯಾಗಿವೆ ಎಂದರು. ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದಂತಹ ಜನಪರ ಯೋಜನೆಗಳಿಂದ ರಾಜ್ಯದ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಸಿಕ್ಕಿದೆ ಎಂದು ತಿಳಿಸಿದರು.
ಇದು ಕೇವಲ ಸುಧಾಕರ್ ಅವರ ಕ್ಷೇತ್ರವಲ್ಲ, ಇದು ನನ್ನ ಹಾಗೂ ಸಿದ್ದರಾಮಯ್ಯನವರ ಕ್ಷೇತ್ರವೂ ಹೌದು. ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ನಿಂತು ಸುಧಾಕರ್ ಅವರ ಆಶೋತ್ತರಗಳನ್ನು ಈಡೇರಿಸಲಿದ್ದೇವೆ ಮತ್ತು ಅವರ ಕುಟುಂಬದ ಬೆನ್ನೆಲುಬಾಗಿ ನಿಲ್ಲುವುದಾಗಿ ಸಿಎಂ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII