ದೇವರಹಿಪ್ಪರಗಿ ಬಳಿ ನಿಂತಿದ್ದ ಟ್ಯ್ರಾಕಟರಗೆ ಟಂಟಂ ಡಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ
ವಿಜಯಪುರ, 26 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಸಮೀಪದ ಡವಳಾರ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ಕಲಕೇರಿ ತಾಂಡಾ ಗ್ರಾಮದ ಥಾವರು ದೀಪು ಚ
ಅಪಘಾತ


ವಿಜಯಪುರ, 26 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಸಮೀಪದ ಡವಳಾರ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಕಲಕೇರಿ ತಾಂಡಾ ಗ್ರಾಮದ ಥಾವರು ದೀಪು ಚವ್ಹಾಣ (55) ಎಂದು ಗುರುತಿಸಲಾಗಿದೆ. ಇವರು ಸೇರಿದಂತೆ ಆರು ಮಂದಿ ಕೂಲಿ ಕಾರ್ಮಿಕರು ಕಲಕೇರಿ ಗ್ರಾಮದಿಂದ ಗುಬ್ಬೇವಾಡ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಂಟಂ ವಾಹನ ಡವಳಾರ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಥಾವರು ದೀಪು ಚವ್ಹಾಣ ಅವರು ಸ್ಥಳದಲ್ಲೇ ಮೃತಪಟ್ಟರೆ, ವಾಹನದಲ್ಲಿದ್ದ ಇತರ ಕಾರ್ಮಿಕರಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹಾಗೂ 108 ಆಂಬುಲೆನ್ಸ್ ಮೂಲಕ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯಂತೆ, ರಸ್ತೆ ಮೇಲೆ ಸುರಕ್ಷತಾ ಕ್ರಮಗಳಿಲ್ಲದೆ ಟ್ರ್ಯಾಕ್ಟರ್ ನಿಲ್ಲಿಸಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೆ, ಅಪಘಾತಕ್ಕೀಡಾದ ಟಂಟಂ ವಾಹನ ಹೊಸದಾಗಿದ್ದು, ಇನ್ನೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಅಳವಡಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ಬಳಿಕ ಟಂಟಂ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್ಐ ಮಂಟೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಿಂದ ಕೆಲಕಾಲ ಅಸ್ತವ್ಯಸ್ತಗೊಂಡಿದ್ದ ರಸ್ತೆ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು.

ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande