
ಬಳ್ಳಾರಿ, 26 ಜುಲೈ (ಹಿ.ಸ.)
ಆ್ಯಂಕರ್ : ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಮೆಣಸಿನಕಾಯಿಗೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಇದ್ದು, ಈ ಪದ್ಧತಿಯನ್ನು ಅನುಸರಿಸಲು ಆಸಕ್ತಿ ಹೊಂದಿರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧ ಎಂದು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರದ ಸಾವಯವ ಕೃಷಿಕ ನಾದೆಂಡ್ಲ ಬ್ರಹ್ಮ ಅವರು ತಿಳಿಸಿದ್ದಾರೆ.
`ಬಳ್ಳಾರಿ ಉದ್ಯಮ ಫೌಂಡೇಶನ್' ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ `ಸಾವಯವ ಮೆಣಸಿನಕಾಯಿ' ಬೆಳೆಯ ಕುರಿತು ಆಯ್ದ 100 ಜನ ರೈತರಲ್ಲಿ ಜಾಗೃತಿ ಮೂಡಿಸುವ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಬೆಳೆಯುತ್ತಿರುವ ಸಾವಯವ ಮೆಣಸಿನಕಾಯಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಬೇಡಿಕೆ ಇದೆ. ಬೇಡಿಕೆಗೆ ಇರುವಷ್ಟು ಉತ್ಪಾದನೆ ಆಗುತ್ತಿಲ್ಲ. ಕಾರಣ ಈ ಭಾಗದ ಕೃಷಿಕರು ಸಾವಯವ ಪದ್ಧತಿಯಲ್ಲಿ ಮೆಣಸಿನಕಾಯಿಯನ್ನು ಬೆಳೆಯಲು ಆಸಕ್ತಿ ತೋರಿಸಬೇಕು ಎಂದು ಹೇಳಿದರು.
ಸಾವಯವ ಕೃಷಿಕ ಗಾಳೆಪ್ಪ ಎತ್ತಿನಬೂದಿಹಾಳ್ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಸಾವಯವ ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವ ಕುರಿತು ಸಮಗ್ರವಾಗಿ ವಿವರಿಸಿದರು.
ಯುವ ಸಂಶೋಧಕರಾಗಿರುವ ಡಾ. ಉಮೇಶ್ ಅವರು, ಮಣ್ಣಿನ ಫಲವತ್ತತೆ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಾವಯವ ಕೃಷಿಯು ಪೂರಕವಾಗಿದೆ. ಅಲ್ಲದೇ, ಜೀವಿಗಳ ಆರೋಗ್ಯವನ್ನು ಸಂರಕ್ಷಣೆ ಮಾಡಲು ಈ ಕೃಷಿ ಪದ್ಧತಿಯು ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಳ್ಳಾರಿ ಉದ್ಯಮ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷರಾಗಿರುವ ಸಿರಿಗೇರಿ ಪನ್ನರಾಜ್ ಅವರು, ಸಾವಯವ ಕೃಷಿಕರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಸೂಕ್ತ ಮಾರುಕಟ್ಟೆಯನ್ನು ಒದಗಿಸಿ, ಶ್ರೀಮಂತರನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಇದಾಗಿದೆ. ಸಾವಯವ ಉತ್ಪನ್ನಗಳು ರಪ್ತು ಆದಲ್ಲಿ ವಿದೇಶೀ ವಿನಿಮಯವನ್ನು ದೇಶದ ಬೊಕ್ಕಸಕ್ಕೆ ನೀಡಿದಂತಾಗುತ್ತದೆ ಎಂದರು.
ಬಳ್ಳಾರಿ ಉದ್ಯಮ ಫೌಂಡೇಶನ್ನ ಸದಸ್ಯರಾದ ದೇವೇಂದ್ರಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್