
ಗದಗ, 26 ಜುಲೈ (ಹಿ.ಸ.)
ಆ್ಯಂಕರ್:- ಭಕ್ತನು ಎಷ್ಟೇ ದೂರದಲ್ಲಿದ್ದರೂ ಆತನ ಮನದಾಳವನ್ನು ಅರಿತು, ತನ್ನ ಬಳಿಗೆ ಸೆಳೆದು ತರುವ ಅಪಾರ ಶಕ್ತಿ ಸದ್ಗುರು ಶ್ರೀ ಶಿರಡಿ ಸಾಯಿಬಾಬಾರಲ್ಲಿದೆ. ಸಾಯಿಬಾಬಾರನ್ನು ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯಿಂದ ಸ್ಮರಿಸಿದರೆ ಜೀವನದಲ್ಲಿ ಎದುರಾಗುವ ಅನೇಕ ಸಂಕಷ್ಟಗಳು ದೂರವಾಗುತ್ತವೆ. ಸಾಯಿಬಾಬಾರ ಪವಾಡಗಳು ಕೇವಲ ನೂರು ವರ್ಷಗಳ ಹಿಂದಿನ ಕಥೆಗಳಲ್ಲ. ಇಂದಿನ ಆಧುನಿಕ ಬದುಕಿನಲ್ಲಿಯೂ ಅವರ ಬೋಧನೆಗಳು ಹಾಗೂ ಜೀವನ ಸಂದೇಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಗದಗ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಅತ್ರಿ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-4ರ ಕಾರ್ಯಕ್ರಮದಲ್ಲಿ ‘ಸಾಯಿಬಾಬಾರ ಬೋಧನೆ ಮತ್ತು ಭಕ್ತ ಪರೀಕ್ಷೆ’ ವಿಷಯದ ಕುರಿತು ಅವರು ಪ್ರವಚನ ನೀಡಿದರು.
ಸದ್ಗುರುವಿನ ಮಹತ್ವವನ್ನು ವಿವರಿಸಿದ ಡಾ. ಎಸ್.ಬಿ. ಶೆಟ್ಟರ, ಮನುಷ್ಯನಿಗೆ ಜನ್ಮ ನೀಡಿದ ತಂದೆ-ತಾಯಿಗಳು ಜೀವನದ ಮೊದಲ ಗುರುಗಳಾಗಿದ್ದಾರೆ. ಆದರೆ ಸದ್ಗುರುವು ಮನುಷ್ಯನಿಗೆ ಬದುಕಿನ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು, ಆತ್ಮಜ್ಞಾನ ಹಾಗೂ ಅಧ್ಯಾತ್ಮದ ಮಾರ್ಗದಲ್ಲಿ ಮುನ್ನಡೆಸುತ್ತಾರೆ. ಮನುಷ್ಯನನ್ನು ಜನನ-ಮರಣದ ಚಕ್ರದಿಂದ ಪಾರು ಮಾಡುವ ಮಾರ್ಗವನ್ನು ತೋರಿಸುವ ಸದ್ಗುರುಗಳು ಜನ್ಮ ನೀಡಿದ ತಂದೆಗಿಂತಲೂ ಶ್ರೇಷ್ಠರು ಎಂಬ ಭಾವನೆಯನ್ನು ಸಾಯಿ ಸಚ್ಚರಿತ್ರೆ ನಮಗೆ ತಿಳಿಸಿಕೊಡುತ್ತದೆ ಎಂದರು.
ಭಕ್ತಿ ಎಂದರೆ ಕೇವಲ ದೇವರ ಮುಂದೆ ನಿಂತು ಪೂಜೆ ಸಲ್ಲಿಸುವುದು, ಹೂವು-ಹಣ್ಣು ಅರ್ಪಿಸುವುದು ಅಥವಾ ಧಾರ್ಮಿಕ ಆಚರಣೆಗಳನ್ನು ನಡೆಸುವುದಕ್ಕೆ ಸೀಮಿತವಾಗಬಾರದು. ಭಕ್ತಿಯ ನಿಜವಾದ ಅರ್ಥ ಸಂಪೂರ್ಣ ಶರಣಾಗತಿ ಮತ್ತು ಸದ್ಗುರುವಿನ ಮೇಲೆ ಅಚಲವಾದ ನಂಬಿಕೆ ಹೊಂದಿರುವುದಾಗಿದೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಗುರುಗಳ ಮೇಲೆ ನಂಬಿಕೆ ಇಟ್ಟು, ಶ್ರದ್ಧೆ ಮತ್ತು ಸಬೂರಿಯಿಂದ ಮುನ್ನಡೆದಾಗ ಸಂಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.
ಸಾಯಿಬಾಬಾರ ಜೀವನದಲ್ಲಿ ಜಾತಿ, ಮತ, ಧರ್ಮ, ಪಂಥ ಹಾಗೂ ಭೇದಭಾವಕ್ಕೆ ಯಾವುದೇ ಸ್ಥಾನವಿರಲಿಲ್ಲ. ಎಲ್ಲ ಧರ್ಮಗಳಲ್ಲಿಯೂ ಇರುವ ಮಾನವೀಯತೆಯ ಸಾರವನ್ನು ಸಾಯಿಬಾಬಾ ತಮ್ಮ ಜೀವನದ ಮೂಲಕ ಸಾರಿದರು. ಮನುಷ್ಯರು ಪರಸ್ಪರ ಪ್ರೀತಿ, ಸಹೋದರತ್ವ ಹಾಗೂ ಸೌಹಾರ್ದತೆಯಿಂದ ಬದುಕಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಇಂದಿನ ಸಮಾಜದಲ್ಲಿ ಧರ್ಮ, ಜಾತಿ ಹಾಗೂ ವಿವಿಧ ವಿಚಾರಗಳ ಆಧಾರದ ಮೇಲೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಸಾಯಿಬಾಬಾರ ಜೀವನ ಮತ್ತು ಬೋಧನೆಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಡಾ. ಶೆಟ್ಟರ ಹೇಳಿದರು.
ಪ್ರವಚನದಲ್ಲಿ ಸಾಯಿ ಸಚ್ಚರಿತ್ರೆಯಲ್ಲಿನ ಹಲವು ಮಹತ್ವದ ಪ್ರಸಂಗಗಳನ್ನು ಉಲ್ಲೇಖಿಸಿದ ಅವರು, ಸಾಯಿಬಾಬಾ ತಮ್ಮ ಭಕ್ತರ ಮನಸ್ಸಿನಲ್ಲಿರುವ ಭಾವನೆಗಳನ್ನು ಅರಿಯುವ ತ್ರಿಕಾಲಜ್ಞಾನಿಯಾಗಿದ್ದರು ಎಂಬುದನ್ನು ವಿವರಿಸಿದರು. ಭಕ್ತನು ತನ್ನ ಸಮಸ್ಯೆಯನ್ನು ಬಾಯಿಂದ ಹೇಳುವ ಮೊದಲೇ ಆತನ ಮನಸ್ಸಿನ ನೋವು ಹಾಗೂ ಸಂಕಷ್ಟವನ್ನು ಅರಿತುಕೊಳ್ಳುವ ಶಕ್ತಿ ಸಾಯಿಬಾಬಾರಲ್ಲಿತ್ತು. ಭಕ್ತನ ಶ್ರದ್ಧೆಯನ್ನು ಪರೀಕ್ಷಿಸುವ ಮೂಲಕ ಆತನಿಗೆ ಆತ್ಮಸ್ಥೈರ್ಯವನ್ನು ತುಂಬಿ, ಸರಿಯಾದ ದಾರಿಯಲ್ಲಿ ನಡೆಸುತ್ತಿದ್ದರು ಎಂದು ಹೇಳಿದರು.
ಕನಸಿನಲ್ಲಿ ಕಂಡ ಸಾಧುವಿನ ಹುಡುಕಾಟದಲ್ಲಿ ಶಿರಡಿಗೆ ಆಗಮಿಸಿದ ಲಕ್ಷ್ಮೀಚಂದನ ಅನುಭವವನ್ನು ವಿವರಿಸಿದ ಅವರು, ಸಾಯಿಬಾಬಾರ ದರ್ಶನ ಪಡೆಯಲು ಭಕ್ತನ ಮನಸ್ಸಿನಲ್ಲಿ ಉಂಟಾದ ಆಕಾಂಕ್ಷೆ ಹಾಗೂ ನಂತರ ಶಿರಡಿಯಲ್ಲಿ ದೊರೆತ ಅನುಭವವು ಗುರು-ಭಕ್ತರ ನಡುವಿನ ದೈವಿಕ ಸಂಬಂಧವನ್ನು ತೋರಿಸುತ್ತದೆ ಎಂದರು. ಹಾಗೆಯೇ ಭಕ್ತಿಯಿಂದ ಸಿದ್ಧಪಡಿಸಿದ ಕಿಚಡಿಯನ್ನು ಸಾಯಿಬಾಬಾ ಸ್ವೀಕರಿಸಿದ ಪ್ರಸಂಗವನ್ನು ವಿವರಿಸಿ, ಭಕ್ತನು ಪ್ರೀತಿಯಿಂದ ಹಾಗೂ ಶುದ್ಧ ಮನಸ್ಸಿನಿಂದ ಸಲ್ಲಿಸುವ ಸಣ್ಣ ಸೇವೆಯನ್ನೂ ಸದ್ಗುರುಗಳು ಸ್ವೀಕರಿಸುತ್ತಾರೆ ಎಂಬ ಸಂದೇಶವನ್ನು ಈ ಘಟನೆ ನೀಡುತ್ತದೆ ಎಂದು ಹೇಳಿದರು.
ಭಕ್ತಿಯ ಹಿಂದೆ ಇರುವ ಭಾವನೆ ಮುಖ್ಯವೇ ಹೊರತು ಭಕ್ತನು ಅರ್ಪಿಸುವ ವಸ್ತುವಿನ ಬೆಲೆ ಮುಖ್ಯವಲ್ಲ. ಶುದ್ಧವಾದ ಮನಸ್ಸಿನಿಂದ, ಯಾವುದೇ ಅಪೇಕ್ಷೆಯಿಲ್ಲದೆ ಸಲ್ಲಿಸುವ ಭಕ್ತಿಯೇ ನಿಜವಾದ ಭಕ್ತಿ. ಭಕ್ತನ ಮನಸ್ಸಿನಲ್ಲಿರುವ ಭಾವನೆಯನ್ನು ಅರಿತುಕೊಳ್ಳುವ ಸದ್ಗುರು ಸಾಯಿಬಾಬಾ, ಭಕ್ತನಿಗೆ ಅಗತ್ಯವಿರುವ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದು ಡಾ. ಶೆಟ್ಟರ ತಿಳಿಸಿದರು.
ಜ್ಯೋತಿಷ್ಯಕ್ಕಿಂತ ಸದ್ಗುರುಗಳ ಆಶೀರ್ವಾದವೇ ಶ್ರೇಷ್ಠ ಎಂಬುದನ್ನು ಪಾರ್ಸಿ ದಂಪತಿಯ ಕಥೆಯ ಮೂಲಕ ವಿವರಿಸಿದ ಅವರು, ಮನುಷ್ಯನ ಜೀವನದಲ್ಲಿ ಭವಿಷ್ಯವನ್ನುತಿಳಿದುಕೊಳ್ಳುವುದಕ್ಕಿಂತ, ಭವಿಷ್ಯವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ನೀಡುವ ಗುರುಕೃಪೆ ಅತ್ಯಂತ ಮಹತ್ವದ್ದಾಗಿದೆ ಎಂದರು. ಜೀವನದಲ್ಲಿ ಎದುರಾಗುವ ಕಷ್ಟಗಳು, ಪರೀಕ್ಷೆಗಳು ಹಾಗೂ ಅನಿರೀಕ್ಷಿತ ಸಮಸ್ಯೆಗಳು ಭಕ್ತನ ಶ್ರದ್ಧೆಯನ್ನು ಪರೀಕ್ಷಿಸುವ ಸಂದರ್ಭಗಳಾಗಿರಬಹುದು. ಅಂತಹ ಸಮಯದಲ್ಲಿ ಭಕ್ತನು ಆತಂಕಕ್ಕೆ ಒಳಗಾಗದೆ ಗುರುಗಳ ಮೇಲೆ ನಂಬಿಕೆ ಇಟ್ಟು ಮುನ್ನಡೆಯಬೇಕು ಎಂದು ಹೇಳಿದರು.
ಸಾಯಿ ಸಚ್ಚರಿತ್ರೆಯಲ್ಲಿನ ವಿವಿಧ ಪ್ರಸಂಗಗಳನ್ನು ಉಲ್ಲೇಖಿಸಿದ ಅವರು, ಪರೀಕ್ಷೆಯಲ್ಲಿ ಯಶಸ್ಸು, ಜೀವನದಲ್ಲಿ ಸಂಕಷ್ಟ ನಿವಾರಣೆ ಹಾಗೂ ಮನಸ್ಸಿನ ನೆಮ್ಮದಿಗೆ ಗುರುಕೃಪೆಯ ಮಹತ್ವವನ್ನು ಮನಮುಟ್ಟುವಂತೆ ನಿರೂಪಿಸಿದರು. ಸಾಯಿಬಾಬಾರ ಬೋಧನೆಗಳನ್ನು ಕೇವಲ ಕೇಳುವುದರಿಂದ ಅಥವಾ ಓದುವುದರಿಂದ ಮಾತ್ರ ಪ್ರಯೋಜನವಿಲ್ಲ. ಅವುಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು, ಇತರರ ಬಗ್ಗೆ ಪ್ರೀತಿ, ಕರುಣೆ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳುವುದು ನಿಜವಾದ ಸಾಯಿಭಕ್ತಿಯಾಗಿದೆ ಎಂದು ತಿಳಿಸಿದರು.
ಸದ್ಗುರು ಸಾಯಿಬಾಬಾರನ್ನು ಸ್ಮರಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಕಷ್ಟದ ಸಮಯದಲ್ಲಿ ಭಕ್ತಿಯು ಮನುಷ್ಯನಿಗೆ ಧೈರ್ಯ ನೀಡುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಓಡಿಹೋಗುವ ಬದಲು ಅವುಗಳನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು ಸಾಯಿಬಾಬಾರ ಬೋಧನೆಗಳು ನೀಡುತ್ತವೆ. ಶ್ರದ್ಧೆ ಮತ್ತು ಸಬೂರಿಯನ್ನು ಜೀವನದ ಎರಡು ಪ್ರಮುಖ ಮಂತ್ರಗಳನ್ನಾಗಿ ಮಾಡಿಕೊಂಡು ಮುನ್ನಡೆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಗುರು ಪೂರ್ಣಿಮೆ ಅಂಗವಾಗಿ ನಡೆದ ಈ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಾಯಿಬಾಬಾರ ನಾಮಸ್ಮರಣೆ, ಭಜನೆ ಹಾಗೂ ಆಧ್ಯಾತ್ಮಿಕ ವಾತಾವರಣದ ನಡುವೆ ನಡೆದ ಪ್ರವಚನವು ಭಕ್ತರ ಗಮನ ಸೆಳೆಯಿತು. ಸಾಯಿ ಸಚ್ಚರಿತ್ರೆಯ ಪ್ರಸಂಗಗಳ ಮೂಲಕ ಸದ್ಗುರು-ಭಕ್ತರ ನಡುವಿನ ಅವಿನಾಭಾವ ಸಂಬಂಧ, ಗುರುಕೃಪೆಯ ಮಹತ್ವ ಹಾಗೂ ಶರಣಾಗತಿಯ ತತ್ವವನ್ನು ವಿವರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪ್ರಸಾದ ಸೇವಾರ್ಥಿಗಳಾದ ಡಾ. ನಂದಿನಿ, ಡಾ. ನಿರಜ ಶೆಟ್ಟರ, ಹುಚ್ಚಣ್ಣ ಶಹಾಪೂರ, ಸುಭಾಷ ಪರಸನಾರ್ಯ್ಕ, ಜಗದೀಶಚಂದ್ರ ನಾಡಗೌಡ್ರ, ಸುಜಾತಾ ಯಾದವಾಡ, ಸುವರ್ಣಾ ಕಳಕಣ್ಣವರ, ಪಂಪನಗೌಡ ಹಾಗೂ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸತ್ಸಂಗ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗುರು ಪೂರ್ಣಿಮೆ ಅಂಗವಾಗಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಸಾಯಿಬಾಬಾರ ಆಶೀರ್ವಾದ ಪಡೆದರು.
ಮಹೇಶಗೌಡ ತಲೇಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ವಾಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸತ್ಸಂಗ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP