
ಬಾಗಲಕೋಟೆ, 26 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾದ ಸಸ್ಯ ಸಂತೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧ ಭಾಗಗಳಷ್ಟೇ ಅಲ್ಲದೆ ನೆರೆಯ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ರೈತರು, ತೋಟಗಾರರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಸಸ್ಯಗಳನ್ನು ಖರೀದಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.
ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ತಜ್ಞರು ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿದ ವಿವಿಧ ಜಾತಿಯ ಹಣ್ಣಿನ, ಹೂವಿನ, ಔಷಧೀಯ, ಅಲಂಕಾರಿಕ ಹಾಗೂ ನೆರಳು ನೀಡುವ ಸಸಿಗಳು ಸಾರ್ವಜನಿಕರ ವಿಶೇಷ ಗಮನ ಸೆಳೆದವು. ಉತ್ತಮ ಗುಣಮಟ್ಟ, ಆರೋಗ್ಯಕರ ಬೆಳವಣಿಗೆ ಹಾಗೂ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ಖರೀದಿಸಿದರು.
ಈ ಬಾರಿ ನಡೆದ ಸಸ್ಯ ಸಂತೆಯಲ್ಲಿ ಸುಮಾರು ₹5 ಲಕ್ಷಕ್ಕೂ ಅಧಿಕ ಮೌಲ್ಯದ ಸಸಿಗಳು ಮಾರಾಟವಾಗಿರುವುದು ವಿಶೇಷವಾಗಿದ್ದು, ಇದು ವಿಶ್ವವಿದ್ಯಾಲಯದ ಸಸ್ಯ ಮಾರಾಟದ ಇತಿಹಾಸದಲ್ಲೇ ದಾಖಲೆ ಮಟ್ಟದ ವಹಿವಾಟು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಸ್ಯ ಸಂತೆಯಲ್ಲಿ ಪರಿಸರ ಸಂರಕ್ಷಣೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ವಾತಾವರಣ ನಿರ್ಮಾಣ, ಮನೆ ತೋಟಗಳ ಅಭಿವೃದ್ಧಿ, ಸಾವಯವ ಕೃಷಿ ಹಾಗೂ ಹಣ್ಣು ಬೆಳೆಗಳ ಕುರಿತು ತಜ್ಞರು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿದರು. ವಿವಿಧ ಸಸ್ಯಗಳ ನಿರ್ವಹಣೆ, ನೀರಾವರಿ, ಗೊಬ್ಬರ ನಿರ್ವಹಣೆ ಮತ್ತು ರೋಗ ನಿಯಂತ್ರಣ ಕುರಿತು ಮಾಹಿತಿಯನ್ನು ನೀಡಲಾಯಿತು.
ಸಸ್ಯ ಸಂತೆಗೆ ಭೇಟಿ ನೀಡಿದ ಸಾರ್ವಜನಿಕರು ವಿಶ್ವವಿದ್ಯಾಲಯದ ಈ ಪ್ರಯತ್ನವನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳನ್ನು ವರ್ಷದಲ್ಲಿ ಹೆಚ್ಚಿನ ಬಾರಿ ಆಯೋಜಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಸ್ಯ ಸಂತೆಯು ಜನರಿಂದ ಭರ್ಜರಿ ಯಶಸ್ಸು ಕಂಡಿದ್ದು, ಹಸಿರು ಕರ್ನಾಟಕ ನಿರ್ಮಾಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande