
ಬೆಂಗಳೂರು, 26 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್‌ವರ್ಕ್ (ಬಿಪಿಎನ್) ಕೊಲೋಕ್ವಿಯಂ–2026 ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಫಿಸಿಯೋಥೆರಪಿ ಆಧುನಿಕ ಆರೋಗ್ಯ ಸೇವೆ ಹಾಗೂ ಕ್ರೀಡಾ ವಿಜ್ಞಾನದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದು, ರೋಗ ತಡೆಗಟ್ಟುವ ಆರೋಗ್ಯ ಸೇವೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇದರ ಬಳಕೆಯನ್ನು ಮತ್ತಷ್ಟು ವಿಸ್ತರಿಸಿ ಕರ್ನಾಟಕವನ್ನು ಫಿಸಿಯೋಥೆರಪಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್‌ವರ್ಕ್ ಸತತ 16ನೇ ವರ್ಷ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ಶ್ಲಾಘಿಸಿದ ಅವರು, ಇಂತಹ ವೃತ್ತಿಪರ ಸಮ್ಮೇಳನಗಳು ಜ್ಞಾನ ವಿನಿಮಯ, ಸವಾಲುಗಳ ಚರ್ಚೆ ಹಾಗೂ ಭವಿಷ್ಯದ ದಿಕ್ಕು ನಿರ್ಧರಿಸುವ ಮಹತ್ವದ ವೇದಿಕೆಗಳಾಗಿವೆ ಎಂದರು.
ಕ್ರೀಡಾಪಟುಗಳಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ತರಬೇತುದಾರರ ಜೊತೆಗೆ ಫಿಸಿಯೋಥೆರಪಿಸ್ಟ್‌ಗಳ ಸೇವೆ ದೊರೆಯುವಂತೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗುವುದು ಎಂದು ತಿಳಿಸಿದರು. ಸುಮಾರು ₹5,000 ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಫಿಸಿಯೋಥೆರಪಿ ಹಾಗೂ ಕ್ರೀಡಾ ವಿಜ್ಞಾನಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಆರೋಗ್ಯ, ಶಿಕ್ಷಣ ಹಾಗೂ ಕ್ರೀಡಾ ಮೂಲಸೌಕರ್ಯಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿದ್ದು, ಕರ್ನಾಟಕವು ಫಿಸಿಯೋಥೆರಪಿ ಮತ್ತು ಪುನರ್ವಸತಿ ಕ್ಷೇತ್ರದಲ್ಲೂ ದೇಶದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. ಫಿಸಿಯೋಥೆರಪಿ ಶಿಕ್ಷಣ, ಸಂಶೋಧನೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ಉತ್ತಮ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.