
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ಪರಿಸರ ಸಂರಕ್ಷಣೆ ಮತ್ತು ಜಲಮೂಲಗಳ ಉಳಿವಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗಾನಯೋಗಿ ತಂಡದ ವತಿಯಿಂದ ವಿಜಯಪುರ ನಗರದ ಭೂತನಾಳ ಕೆರೆ ಸುತ್ತಮುತ್ತ ಭಾನುವಾರ ವ್ಯಾಪಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ತಂಡದ ಮುಖ್ಯಸ್ಥ ಪ್ರಕಾಶ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಗಾನಯೋಗಿ ತಂಡದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು, ಕೆರೆ ದಡ ಹಾಗೂ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಖಾಲಿ ಬಾಟಲಿಗಳು, ಗಾಜಿನ ಚೂರುಗಳು, ಬಳಕೆಯಿಲ್ಲದ ವಸ್ತುಗಳು ಹಾಗೂ ಇತರೆ ಕಸವನ್ನು ಸಂಗ್ರಹಿಸಿ ತೆರವುಗೊಳಿಸಿದರು. ಹಲವು ಗಂಟೆಗಳ ಕಾಲ ನಡೆದ ಈ ಸ್ವಚ್ಛತಾ ಕಾರ್ಯದ ಮೂಲಕ ಕೆರೆ ಪರಿಸರವನ್ನು ಶುಚಿಗೊಳಿಸಿ ಸಾರ್ವಜನಿಕರಿಗೆ ಸ್ವಚ್ಛ ಪರಿಸರದ ಸಂದೇಶವನ್ನು ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಮುಖ್ಯಸ್ಥ ಪ್ರಕಾಶ, ಕೆರೆಗಳು ನಮ್ಮ ಜೀವನಾಡಿಯಾಗಿದ್ದು, ನೀರಿನ ಮೂಲಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪರಿಸರವನ್ನು ಕಲುಷಿತಗೊಳಿಸದೆ, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಕೆರೆ ಪ್ರದೇಶಗಳಲ್ಲಿ ಎಸೆಯದಂತೆ ಸಾರ್ವಜನಿಕರು ಜಾಗೃತರಾಗಬೇಕು. ನಮ್ಮ ಸಣ್ಣ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡಲು ನೆರವಾಗುತ್ತವೆ, ಎಂದು ಹೇಳಿದರು.
ಗಾನಯೋಗಿ ತಂಡವು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಪರಿಸರ ಸಂರಕ್ಷಣೆ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.
ಈ ಸ್ವಚ್ಛತಾ ಅಭಿಯಾನದಲ್ಲಿಯೂ ತಂಡದ ಸದಸ್ಯರು ಶ್ರಮದಾನದ ಮೂಲಕ ಮಾದರಿಯಾಗಿದ್ದು, ಸಾರ್ವಜನಿಕರೂ ಇಂತಹ ಅಭಿಯಾನಗಳಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯವಾಗಿದ್ದು, ಕೆರೆಗಳು ಹಾಗೂ ಜಲಮೂಲಗಳನ್ನು ಕಾಪಾಡುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande