
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಸೇರಬೇಕು ಎಂಬ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಎಸ್ಐಆರ್ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾಡೆ ಹಾಗೂ ಗೂಗಿಹಾಳ ಗ್ರಾಮಗಳಲ್ಲಿ ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಅವರು ಮನೆ-ಮನೆಗೆ ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಅಭಿಯಾನದ ವೇಳೆ ಗ್ರಾಮಸ್ಥರನ್ನು ಭೇಟಿ ಮಾಡಿದ ಅವರು, ಪ್ರತಿಯೊಬ್ಬ ನಾಗರಿಕನ ಮತವೂ ದೇಶದ ಭವಿಷ್ಯವನ್ನು ನಿರ್ಧರಿಸುವ ಅಮೂಲ್ಯ ಹಕ್ಕು. ಆದ್ದರಿಂದ ಪ್ರತಿಯೊಬ್ಬ ಅರ್ಹ ಮತದಾರರ ಹೆಸರೂ ಮತದಾರರ ಪಟ್ಟಿಯಲ್ಲಿ ಇರಬೇಕು. ಹೊಸದಾಗಿ ಮತದಾನದ ಅರ್ಹತೆ ಪಡೆದ ಯುವಜನರು ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳಬೇಕು ಹಾಗೂ ಈಗಾಗಲೇ ಹೆಸರು ಇರುವವರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮದ ವಿವಿಧ ಭಾಗಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದ ಶ್ರೀಶೈಲಗೌಡ ಬಿರಾದಾರ ಅವರು, ತಕ್ಷಣವೇ ಸ್ಥಳೀಯ ಬಿಎಲ್ಒ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈ ತಪ್ಪದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಗಳ ಹಿರಿಯರು, ತಾಯಂದಿರು, ಮಹಿಳೆಯರು ಹಾಗೂ ಯುವಕರೊಂದಿಗೆ ಸಂವಾದ ನಡೆಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರತಿಯೊಬ್ಬ ನಾಗರಿಕನೂ ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಿ, ತಮ್ಮ ಕುಟುಂಬದ ಎಲ್ಲ ಅರ್ಹ ಸದಸ್ಯರ ಹೆಸರುಗಳು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮಹಾ ಸಂಪರ್ಕ ಅಭಿಯಾನಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮತದಾರರ ಪಟ್ಟಿಯ ಕುರಿತು ಹಲವರು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಕೂಡ ಅಭಿಯಾನದಲ್ಲಿ ಪಾಲ್ಗೊಂಡು ಮನೆ-ಮನೆಗೆ ತೆರಳಿ ಮತದಾರರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande