
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ ಹಮ್ಮಿಕೊಳ್ಳಲಾಗಿರುವ ಎಸ್ಐಆರ್
ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ಭಾನುವಾರ ಮನೆ-ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸುವ ಕಾರ್ಯಕ್ರಮ ನಡೆಯಿತು. ಅಭಿಯಾನದ ಭಾಗವಾಗಿ ವಾರ್ಡ್ ಸಂಖ್ಯೆ–3ರ ಬೂತ್ ಸಂಖ್ಯೆ–83ರಲ್ಲಿ ಬಿಜೆಪಿ ಮುಖಂಡ ಸಂದೀಪ್ ಪಾಟೀಲ್ ಝಳಕಿ ಹಾಗೂ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿಕೊಂಡು ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸರಿಯಾಗಿ ದಾಖಲೆಯಾಗಿರುವುದು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಮತದಾರರಿಗೆ ಮಾಹಿತಿ ನೀಡುತ್ತಿದ್ದು, ಅಭಿಯಾನವನ್ನು ಯಶಸ್ವಿಗೊಳಿಸಲು ಪಕ್ಷದ ಎಲ್ಲ ಕಾರ್ಯಕರ್ತರು ತಮ್ಮ ತಮ್ಮ ಬೂತ್ಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮತದಾರರನ್ನು ನೇರವಾಗಿ ಸಂಪರ್ಕಿಸಿ ಅವರ ಸಮಸ್ಯೆಗಳು, ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಆಲಿಸುವ ಮೂಲಕ ಪಕ್ಷ ಮತ್ತು ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಯಿತು.
ಅಭಿಯಾನದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಎಂ. ಎಸ್. ಕಾರಡಿ, ಪಕ್ಷದ ಮುಖಂಡರಾದ ಸುರೇಶ್ ಬಿರಾದಾರ್, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಮಲ್ಲುಗೌಡ ಬಾಬಾಗೌಡ, ಮಹೇಶ್ ಒಡೆಯರ್, ಚಿನ್ನು ಚಿನಗುಂಡಿ, ರಾಮಚಂದ್ರ ಚವಾಣ್, ವಿಜಯ ಹಿರೇಮಠ್, ಪ್ರಫುಲ್ ಪವಾರ್, ಮಂಥನ್ ಗಾಯಕ್ವಾಡ್, ವಿವೇಕ ತವರಗೇರಿ, ಸಂತೋಷ್ ಪಟ್ಟರ್, ಬಸವರಾಜ್ ಮನೂರ್, ಪಾಂಡುರಂಗ ಭೋಸಲೆ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಭುಯ್ಯಾರ್, ಜಯಶ್ರೀ ಅಫಜಲಪುರ, ಕಲ್ಲು ರೂಗಿ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಎಸ್ಐಆರ್ ಮಹಾ ಸಂಪರ್ಕ ಅಭಿಯಾನದ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಜನಜಾಗೃತಿ ಮೂಡಿಸುವ ಜೊತೆಗೆ ಪ್ರತಿಯೊಬ್ಬ ಮತದಾರರಿಗೂ ತಲುಪುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಕೈಗೊಂಡಿದ್ದಾರೆ. ವಿಜಯಪುರ ನಗರದಲ್ಲಿಯೂ ಈ ಅಭಿಯಾನಕ್ಕೆ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ನಗರದ ವಿವಿಧ ವಾರ್ಡ್ಗಳಲ್ಲಿಯೂ ಮನೆ-ಮನೆ ಸಂಪರ್ಕ ಕಾರ್ಯಕ್ರಮ ಮುಂದುವರಿಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande