
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:
ಮನೆಗೆ ದೋಷವಿದ್ದು, ಸಾವಿನ ಕಂಟಕವಿದೆ ಎಂದು ಹೆದರಿಸಿ ಬುಡುಬುಡುಕೆ ಸ್ವಾಮೀಜಿ ವೇಷ ಧರಿಸಿ ಬಂದ ಖದೀಮನೊಬ್ಬ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ನಡೆದಿದೆ.
ದಂಪತಿಗಳ ಮೋಡನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಸ್ವಾಮೀಜಿ ಲಕ್ಷಾತರ ರೂಪಾಯಿ ಬೆಲೆ ಬಾಳುವ ಬಂಗಾರ ದೋಚಿ ಪರಾರಿಯಾಗಿದ್ದಾನೆ.
ಮೋಹನ್ ಎಂಬುವರ ಮನೆಗೆ ತೆರಳಿದ ವಂಚಕ, ಎಂಟು ತಿಂಗಳ ಗರ್ಭಿಣಿಯಾಗಿರುವ ಅವರ ಪತ್ನಿ ಉಷಾ ಅವರನ್ನು ಗುರಿಯಾಗಿಸಿಕೊಂಡಿದ್ದಾನೆ. ಮನೆಗೆ ದೊಡ್ಡ ದೋಷವಿದೆ ಎಂದು ಭಯ ಹುಟ್ಟಿಸಿ, ಹಣ ಪಡೆಯದೆ ಉಚಿತವಾಗಿ ಪೂಜೆ ಮಾಡುವುದಾಗಿ ನಂಬಿಸಿದ್ದಾನೆ. ಪೂಜೆಯ ನೆಪದಲ್ಲಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಮಣ್ಣಿನ ಕುಡಿಕೆಯಲ್ಲಿ ಹಾಕಿಸಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ನಂಬಿಸಿದ್ದಾನೆ. ಸ್ವಾಮೀಜಿಯ ಮಾತು ನಂಬಿದ ದಂಪತಿಗಳು, ಸ್ವಾಮೀಜಿ ಹೇಳಿದ ಹಾಗೆ ಪೂಜೆಗೆ ತಯಾರಿ ಮಾಡಿಕೊಂಡಿದ್ದಾರೆ.
ಪೂಜೆಯೆ ನೆಪದಲ್ಲಿ ಉಷಾ ಅವರು ತಮ್ಮ ಕಿವಿಯೋಲೆ ಹಾಗೂ ಉಂಗುರ ಸೇರಿದಂತೆ ಒಟ್ಟು 1.20 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕುಡಿಕೆಯಲ್ಲಿ ಇಟ್ಟಿದ್ದಾರೆ. ಬಳಿಕ ನೀರು ತರುವಂತೆ ಉಷಾಗೆ ಹೇಳಿ ವಂಚಕ ಕುಡಿಕೆಯನ್ನು ಬದಲಾಯಿಸಿದ್ದಾನೆ. ಮತ್ತೊಂದು ವಸ್ತು ನೀಡಿ ಅದನ್ನು ಕೆರೆಗೆ ವಿಸರ್ಜಿಸುವಂತೆ ಕಳುಹಿಸಿ, ದಂಪತಿ ಹಿಂದಿರುಗುವಷ್ಟರಲ್ಲಿ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ವಂಚಿಸಿ ಪರಾರಿಯಾಗಿರುವ ನಕಲಿ ಸ್ವಾಮೀಜಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII