
ಚಿಸಿನೌ (ಮೌಲ್ಡೋವಾ), 21 ಜುಲೈ (ಹಿ.ಸ.):
ಆ್ಯಂಕರ್:
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಮೂರು ರಾಷ್ಟ್ರಗಳ ಸರ್ಕಾರಿ ಪ್ರವಾಸದ ಮೊದಲ ಹಂತವನ್ನು ಮೌಲ್ಡೋವಾದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇಂದು ಅವರು ಎರಡು ದಿನಗಳ ಉತ್ತರ ಮ್ಯಾಸಿಡೋನಿಯಾ ಪ್ರವಾಸ ಆರಂಭಿಸಲಿದ್ದಾರೆ.
ಉತ್ತರ ಮ್ಯಾಸಿಡೋನಿಯಾಗೆ ತೆರಳುವ ಮುನ್ನ, ಮೌಲ್ಡೋವಾ ರಾಷ್ಟ್ರಪತಿ ಮಾಯಾ ಸಂಡು ಅವರ ಆತಿಥ್ಯದಲ್ಲಿ ಆಯೋಜಿಸಿದ್ದ ಸರ್ಕಾರಿ ಔತಣಕೂಟದಲ್ಲಿ ರಾಷ್ಟ್ರಪತಿ ಮುರ್ಮು ಭಾಗವಹಿಸಿದರು. ಅಲ್ಲದೆ, ಚಿಸಿನೌದಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು.
ಮೌಲ್ಡೋವಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ. ಈ ವೇಳೆ ಅವರು ಮೌಲ್ಡೋವಾ ರಾಷ್ಟ್ರಪತಿ ಮಾಯಾ ಸಂಡು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ, ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಸಭೆಗೆ ನೇತೃತ್ವ ವಹಿಸಿದರು.
ಕೃಷಿ, ಆರೋಗ್ಯ, ಔಷಧೋದ್ಯಮ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ ಹಾಗೂ ನವೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.
ರಾಷ್ಟ್ರಪತಿ ಮುರ್ಮು ಭಾರತ–ಮೌಲ್ಡೋವಾ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ, 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಗುರಿ ಸಾಧನೆಗೆ ಪರಸ್ಪರ ವಿಶ್ವಾಸ ಮತ್ತು ಹಂಚಿಕೆಯ ಸಮೃದ್ಧಿಯ ಆಧಾರದ ಮೇಲಿನ ಅಂತರರಾಷ್ಟ್ರೀಯ ಸಹಭಾಗಿತ್ವಕ್ಕೆ ಭಾರತ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಉತ್ತರ ಮ್ಯಾಸಿಡೋನಿಯಾ ಪ್ರವಾಸದ ಬಳಿಕ ರಾಷ್ಟ್ರಪತಿ ಮುರ್ಮು ರೊಮೇನಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.