ಸುಳ್ಳು ಸುದ್ಧಿಗಳನ್ನು ತಡೆಯಲು ಪತ್ರಕರ್ತರಿಗೆ ಕರೆ
ಸುಳ್ಳು ಸುದ್ಧಿಗಳನ್ನು ತಡೆಯಲು ಪತ್ರಕರ್ತರಿಗೆ ಕರೆ
ಕೇಂದ್ರ ಸರ್ಕಾರದ ಪಿ.ಐ.ಬಿ. ಯಿಂದ ಕೋಲಾರದಲ್ಲಿ ಪತ್ರಕರ್ತರಿಗೆ ನಡೆದ ವಾರ್ತಾಲಾಪ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಬಾಗೇವಾಡಿ ಉದ್ಘಾಟಿಸಿದರು.


ಕೋಲಾರ : ಜುಲೈ ೨(ಹಿ.ಸ.)

ಆಂಕರ್ : ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರ ಜವಾಬ್ದಾರಿ ಹೆಚ್ಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಪತ್ರಕರ್ತರು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.

ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ವಾರ್ತಾಲಾಪ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಸರ್ಕಾರದ ಪುರಸ್ಕೃತ ಯೋಜನೆಗಳನ್ನು ಜನರಿಗೆ ತಲುಪಿಸಲು ಪತ್ರಕರ್ತರ ಪಾತ್ರ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳ ಜೊತೆಗೆ ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚಾಗಿದೆ. ಇದರಿಂದ ಅನುಕೂಲಗಳಿದ್ದರೂ, ಸುಳ್ಳು ಸುದ್ದಿಗಳು ಅತಿ ವೇಗವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯಾವುದೇ ಸಣ್ಣ ನಕಾರಾತ್ಮಕ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು. ಜಿಲ್ಲಾಡಳಿತವು ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದೆ. ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಮಾಧ್ಯಮಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಪಿಐಬಿಯ ಸಹಾಯಕ ನಿರ್ದೇಶಕ ಮಧು.ಎಂ ಮಾತನಾಡಿ ಸರ್ಕಾರದ ಯೋಜನೆಗಳ ಲಾಭವು ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂಬ ಆಶಯದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಅದನ್ನು ಪತ್ರಿಕೆಗಳು ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮತ್ತು ತಳ ಮಟ್ಟದ ಫಲಾನುಭವಿಗಳಿಗೆ ತಲುಪಿಸುವುದು ವಾರ್ತಾಲಾಪ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಕೆ. ಚಂದ್ರಶೇಖರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಆದರೆ, ಈ ಯೋಜನೆಗಳು ಕೇವಲ ಅಧಿಕಾರಿಗಳ ಮಟ್ಟದಲ್ಲೇ ಉಳಿದರೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.ಮಾಧ್ಯಮಗಳ ಮೂಲಕ ಈ ಯೋಜನೆಗಳನ್ನು ಪ್ರಸಾರ ಮಾಡಿದಾಗ ಮಾತ್ರ ಅವು ಹಳ್ಳಿಗಾಡಿನ ಕಟ್ಟಕಡೆಯ ವ್ಯಕ್ತಿಗೂ ತಲುಪಲು ಸಾಧ್ಯವಾಗುತ್ತದೆ ಎಂದರು.

ಹಿAದೆ ಕೇವಲ ದೂರದರ್ಶನ ಮತ್ತು ರೇಡಿಯೋ ಮಾತ್ರ ಇದ್ದಿದ್ದರಿಂದ ಮಾಹಿತಿ ತಲುಪುವುದು ಕಷ್ಟವಿತ್ತು. ಆದರೆ ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುವುದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ತುಂಬಾ ವೇಗವಾಗಿ ಜನರನ್ನು ತಲುಪುತ್ತಿದೆ.

ವಾರ್ತಾ ಇಲಾಖೆಯ ಅಧಿಕಾರಿಗಳು ಪ್ರತಿ ತಿಂಗಳು ಸರ್ಕಾರದ ಹೊಸ ಯೋಜನೆಗಳು, ಅದಕ್ಕೆ ಬಿಡುಗಡೆಯಾದ ಅನುದಾನ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬೇಕು.ಅಧಿಕಾರಿಗಳು ಮತ್ತು ಪತ್ರಕರ್ತರು ಒಟ್ಟಾಗಿ ಒಂದು ''ಸೇತುವೆ'ಯಾಗಿ ಕೆಲಸ ಮಾಡಿದರೆ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದು. ಇಂತಹ ಕಾರ್ಯಾಗಾರಗಳನ್ನು ಆಯೋಜಿಸಿ ಪತ್ರಕರ್ತರಿಗೆ ಮಾಹಿತಿ ನೀಡುತ್ತಿರುವುದು ತುಂಬಾ ಸಂತೋಷದ ವಿಚಾರ. ಈ ಮೂಲಕ ಪತ್ರಕರ್ತರಿಗೂ ಸರ್ಕಾರದ ಯೋಜನೆಗಳ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ತಿಳಿಸಿದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರ ಗಣೇಶ್ ಕೆ.ಎಸ್. ಮಾತನಾಡಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಈ ರೀತಿ ಜಿಲ್ಲಾ ಮಟ್ಟಕ್ಕೆ ಬಂದು ವಾರ್ತಾಲಾಪ ಕಾರ್ಯಕ್ರಮ ಆಯೋಜಿಸಿರುವುದು ಇದೇ ಮೊದಲು ಎಂದು ಶ್ಲಾಘಿಸಿದರು. ಕಳೆದ ಒಂದು ವರ್ಷದಿಂದ ಸಣ್ಣ ಪತ್ರಿಕೆಗಳ ನಿಯಮಿತ ಅಪ್ಲೋಡ್ ಪ್ರಕ್ರಿಯೆಯಿಂದಾಗಿ ಪತ್ರಕರ್ತರು ಮತ್ತು ಪಿಐಬಿ ನಡುವೆ ಉತ್ತಮ ಸಂಪರ್ಕ ಬೆಳೆದಿದೆ ಎಂದರು.

ಕೇAದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ತಂದರೂ, ಅವುಗಳ ಬಗ್ಗೆ ಪತ್ರಕರ್ತರಿಗೂ ಹಾಗೂ ಸಾರ್ವಜನಿಕರಿಗೂ ಸರಿಯಾದ ಮಾಹಿತಿ ತಲುಪುತ್ತಿಲ್ಲ. ಜಿಲ್ಲಾ ಹಾಗೂ ಪ್ರಾದೇಶಿಕ ಮಟ್ಟದ ಸಣ್ಣ ಪತ್ರಿಕೆಗಳು ತಳಮಟ್ಟದ ಜನರನ್ನು ತಲುಪುವುದರಿಂದ, ಇಂತಹ ಪತ್ರಿಕೆಗಳಿಗೆ ನಿರಂತರವಾಗಿ ಮಾಹಿತಿ ಒದಗಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ವಾರ್ತಾ ಇಲಾಖೆಯ ಮಾದರಿಯಲ್ಲಿಯೇ ಪಿಐಬಿ ಕೂಡ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇಮೇಲ್ ಗ್ರೂಪ್ ಅಥವಾ ವಾಟ್ಸಾಪ್ ಗ್ರೂಪ್ ಮೂಲಕ ಕೋಲಾರ ಜಿಲ್ಲೆಯ ಪತ್ರಕರ್ತರಿಗೆ ಪ್ರತಿನಿತ್ಯ ಸುದ್ಧಿ ಮತ್ತು ಯೋಜನೆಗಳ ವಿವರಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಎಂ.ಎನ್.ಮAಜುಳಾ 'ಸಮೃದ್ಧ ರಾಷ್ಟ್ರಕ್ಕಾಗಿ ರೈತ ಕಾರ್ಯಕ್ರಮಗಳು' ಕುರಿತ ಮಾಹಿತಿ ಸೇರಿದಂತೆ ಕೇಂದ್ರ ಸರ್ಕಾರದ ಕೃಷಿ ಇಲಾಖೆಯಡಿ ಬರುವ ಯೋಜನೆಗಳ ಬಗ್ಗೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿ ಮುನಿರಾಜು, ಮಹಿಳಾ ಸಶಕ್ತೀಕರಣ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ವ್ಯವಸ್ಥಾಪಕ ಆರ್.ಶಿವಕುಮಾರ್, ಆರ್ಥಿಕ ಸೇರ್ಪಡೆ ಕುರಿತ ಅಟಲ್ ಪೆನ್ಷನ್ ಯೋಜನೆ, ಪಿಎಂಜೆಜೆವೈ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮಾಹಿತಿ ನೀಡಿದರು.

ಯುವಜನ ಮತ್ತು ಕ್ರೀಡಾ ಸಚಿವಾಲಯ, ಮೈಭಾರತ್, ಜಿಲ್ಲಾ ಯುವ ಅಧಿಕಾರಿ ಎ.ಮಹೇಂದ್ರ ರೆಡ್ಡಿ ಯುವ ಶಕ್ತಿಗೆ ಪ್ರೋತ್ಸಾಹ ಕುರಿತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್,ಮಾಜಿ ಅಧ್ಯಕ್ಷ ಕೆ.ವಿ.ಗೋಪಿನಾಥ್, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮೈಲಾರಪ್ಪ, ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು ಮುನಿರಾಜು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ಶಿವಕುಮಾರ್, ಜಿಲ್ಲಾ ಯುವ ಅಧಿಕಾರಿ

ಎ. ಮಹೇಂದ್ರ ರೆಡ್ಡಿ, ಪ್ರಜಾವಾಣಿ ಹಿರಿಯ ವದಿಗಾರ ಓಂಕಾರ್ ಮೂರ್ತಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande