
ಗದಗ, 02 ಜುಲೈ (ಹಿ.ಸ.):
ಆ್ಯಂಕರ್:-
ಗದಗ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ತೀವ್ರ ಆರೋಪ ಮಾಡಿದ್ದು, ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಆದರೆ ಈ ಆರೋಪವನ್ನು ಜಿಮ್ಸ್ ನಿರ್ದೇಶಕರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಮಹಿಳೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದ ರತ್ನವ್ವ ಈಟಿ (45) ಮೃತಪಟ್ಟ ಮಹಿಳೆ. ಹೊಟ್ಟೆ ನೋವು ಹಾಗೂ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತಳ ಪುತ್ರರು ಸೇರಿದಂತೆ ಕುಟುಂಬಸ್ಥರ ಆರೋಪದ ಪ್ರಕಾರ, ರತ್ನವ್ವ ಅವರು ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದರೂ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಲಿಲ್ಲ. ಹಲವು ಬಾರಿ ನೋವು ಹೆಚ್ಚಾಗಿದೆ ಎಂದು ತಿಳಿಸಿದರೂ ವೈದ್ಯರು ಸೂಕ್ತ ಗಮನ ಹರಿಸಲಿಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಅಥವಾ ಕನಿಷ್ಠ ಒಂದು ಇಂಜೆಕ್ಷನ್ ನೀಡಿದ್ದರೆ ತಮ್ಮ ತಾಯಿ ಬದುಕುತ್ತಿದ್ದರು ಎಂದು ಅವರು ಕಣ್ಣೀರಿಟ್ಟರು.
ವೈದ್ಯರ ನಿರ್ಲಕ್ಷ್ಯವೇ ತಮ್ಮ ತಾಯಿಯ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ ಕುಟುಂಬಸ್ಥರು, ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಗ್ಗೆ ವೈದ್ಯರು ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ, ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ರತ್ನವ್ವ ಅವರು ಹೊಟ್ಟೆ ನೋವು ಹಾಗೂ ಚರ್ಮ ಕಾಯಿಲೆ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಅವರು ಈ ಹಿಂದೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ಟೀರಾಯ್ಡ್ ಇಂಜೆಕ್ಷನ್ಗಳನ್ನು ಬಳಸಿದ್ದ ಹಿನ್ನೆಲೆ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು ಎಂದು ವಿವರಿಸಿದರು.
ಕುಟುಂಬಸ್ಥರೇ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ತೆರಳಿದ್ದರು. ಆದರೆ ಆಸ್ಪತ್ರೆ ಆವರಣದಿಂದ ಹೊರಡುವ ವೇಳೆ ಮಹಿಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತದಿಂದ ಸಾವಾಗಿರುವ ಶಂಕೆ ಇದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ನಿರ್ದೇಶಕರು ತಿಳಿಸಿದರು.
ಘಟನೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದರು. ಮತ್ತೊಂದೆಡೆ ಆಸ್ಪತ್ರೆ ಆಡಳಿತವು ವೈದ್ಯರು ನಿಯಮಾನುಸಾರ ಚಿಕಿತ್ಸೆ ನೀಡಿದ್ದು, ಸಾವಿನ ನಿಖರ ಕಾರಣ ವೈದ್ಯಕೀಯ ಪರೀಕ್ಷೆಯ ನಂತರವೇ ಸ್ಪಷ್ಟವಾಗಲಿದೆ ಎಂದು ತಿಳಿಸಿದೆ.
ಈ ಘಟನೆ ಜಿಲ್ಲೆಯಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದು, ಮಹಿಳೆಯ ಸಾವಿನ ನಿಖರ ಕಾರಣ ಏನು ಎಂಬುದು ವೈದ್ಯಕೀಯ ವರದಿ ಹಾಗೂ ಮುಂದಿನ ತನಿಖೆಯ ಬಳಿಕವೇ ತಿಳಿಯಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP