
ಬಾಗಲಕೋಟೆ, 02 ಜುಲೈ (ಹಿ.ಸ.)
ಆ್ಯಂಕರ್ : ದೂರು ನೀಡಿರುವ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಗೆ ಬಂದಿದ್ದ ವ್ಯಕ್ತಿಯೊಂದಿಗೆ ಪಿಎಸ್ಐ ಹಾಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸಿ, ಎದೆ ಮೇಲಿನ ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಬಾಗಲಕೋಟೆ ತಾಲೂಕು ಮಾದಿಗ ಮಹಾಸಭಾ ಕಾರ್ಯದರ್ಶಿ ಕುಮಾರ್ ಬೆಣ್ಣೂರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಯಾಗಿದ್ದು, ಠಾಣೆಗೆ ಬರುವ ಪ್ರತಿಯೊಬ್ಬ ನಾಗರಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದು ಕರ್ತವ್ಯವಾಗಿದೆ. ಆದರೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಇದಕ್ಕೆ ವಿರುದ್ಧವಾಗಿದೆ ಎಂದು ದೂರಿದರು.
ವೆರಿಫಿಕೇಶನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ಪಿಎಸ್ಐ ಗಿರೀಶ್ ಎಂ ಹಾಗೂ ಕೆಲ ಸಿಬ್ಬಂದಿ ಯಾವುದೇ ಕಾರಣವಿಲ್ಲದೆ ದರ್ಪದಿಂದ ವರ್ತಿಸಿ, ಎದೆ ಮೇಲಿನ ಕಾಲರ್ ಹಿಡಿದು ಲೋಫರ್ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಜಾತಿ ನಿಂದನೆಯ ಪದಗಳನ್ನು ಬಳಸಿ ಅವಮಾನ ಮಾಡಿದ್ದಾರೆ ಎಂದು ಕುಮಾರ್ ಬೆಣ್ಣೂರ ಆರೋಪಿಸಿದರು.
ಇಂತಹ ವರ್ತನೆ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವಂತದ್ದಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಸಮುದಾಯದವರ ಮೇಲೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸತ್ಯಾಸತ್ಯತೆ ಪರಿಶೀಲಿಸಿ ನ್ಯಾಯ ಒದಗಿಸಬೇಕು. ಅಗತ್ಯವಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande