
ಗದಗ, 02 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ, ದೋಷರಹಿತ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಗದಗ ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿದೆ. ಜಿಲ್ಲೆಯಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುತ್ತಿದ್ದು, ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ.
ಈ ಮೂಲಕ ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ದಾಖಲಿಸುವ ಕೆಲಸಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಿದೆ.
ಜಿಲ್ಲಾಡಳಿತದ ಪ್ರಕಟಣೆಯ ಪ್ರಕಾರ, ಗದಗ ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದು, ಇವರಿಗಾಗಿ 967 ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಜಿಲ್ಲೆಯ 96.38 ಶೇಕಡಾ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಉಳಿದ ಮತದಾರರನ್ನು ಗುರುತಿಸಿ ಅವರ ಮಾಹಿತಿಯನ್ನು ದೃಢೀಕರಿಸುವ ಕಾರ್ಯವೂ ಮುಂದುವರಿದಿದೆ.
ಎಸ್ಐಆರ್ ಪ್ರಕ್ರಿಯೆಯ ಪ್ರಮುಖ ಹಂತವಾದ ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಜುಲೈ 1ರವರೆಗೆ ಒಟ್ಟು 73,568 ಎನ್ಯುಮರೇಷನ್ ಫಾರ್ಮ್ಗಳನ್ನು ಬಿಎಲ್ಒಗಳು ಮತದಾರರಿಗೆ ವಿತರಿಸಿದ್ದಾರೆ. ಇದೇ ವೇಳೆ ಸಲ್ಲಿಕೆಯಾದ ಅರ್ಜಿಗಳನ್ನು ಡಿಜಿಟಲ್ ವ್ಯವಸ್ಥೆಗೆ ದಾಖಲಿಸುವ ಕಾರ್ಯವೂ ಆರಂಭಗೊಂಡಿದ್ದು, ಇದುವರೆಗೆ 4,200 ಎನ್ಯುಮರೇಷನ್ ಫಾರ್ಮ್ಗಳ ಡಿಜಿಟಲೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಜಿಲ್ಲೆಯ ಎಲ್ಲಾ ಬಿಎಲ್ಒಗಳು ಜುಲೈ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರಿಗೂ ಎನ್ಯುಮರೇಷನ್ ಫಾರ್ಮ್ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮತದಾರರ ಹೆಸರು, ವಿಳಾಸ, ಕುಟುಂಬದ ವಿವರ, ವಯಸ್ಸು ಹಾಗೂ ಇತರ ಮಾಹಿತಿಯನ್ನು ಪರಿಶೀಲಿಸುವ ಜೊತೆಗೆ, ಫಾರ್ಮ್ ಭರ್ತಿ ಮಾಡುವ ಕುರಿತು ಅಗತ್ಯ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.
ಈ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು, ಸ್ಥಳಾಂತರಗೊಂಡಿರುವ ಮತದಾರರ ಮಾಹಿತಿಯನ್ನು ಪರಿಷ್ಕರಿಸುವುದು, ಮೃತರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಹಾಗೂ ಹೊಸದಾಗಿ ಅರ್ಹತೆ ಪಡೆದ ಮತದಾರರನ್ನು ಸೇರ್ಪಡೆಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ವಿಶೇಷ ಮಹತ್ವ ನೀಡಲಾಗಿದೆ.
ಜಿಲ್ಲಾಡಳಿತವು ಮತದಾರರಿಗೆ ಯಾವುದೇ ಗೊಂದಲ ಉಂಟಾಗದಂತೆ ಎಸ್ಐಆರ್ ಕುರಿತು ವ್ಯಾಪಕ ಅರಿವು ಮೂಡಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬಿಎಲ್ಒಗಳ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಮತದಾರರು ಫಾರ್ಮ್ಗಳನ್ನು ನಿಖರವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಎಲ್ಲ ಮತದಾರರು ಬಿಎಲ್ಒಗಳಿಗೆ ಅಗತ್ಯ ಸಹಕಾರ ನೀಡಬೇಕು. ಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಒದಗಿಸಿ, ಎನ್ಯುಮರೇಷನ್ ಫಾರ್ಮ್ಗಳನ್ನು ತ್ವರಿತವಾಗಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ವ್ಯವಸ್ಥಿತವಾಗಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಫಾರ್ಮ್ ವಿತರಣೆ ಮತ್ತು ಡಿಜಿಟಲೀಕರಣದ ಕಾರ್ಯ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಜುಲೈ 29ರೊಳಗೆ ಎಲ್ಲಾ ಮತದಾರರನ್ನು ತಲುಪಿ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಹಾಗೂ ಚುನಾವಣಾ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP