ಬಳ್ಳಾರಿ: ಕಾಲೇಜು ವಿದ್ಯಾರ್ಥಿಗಳಿಂದ ಎಸ್ಐಆರ್ ಪ್ರಕ್ರಿಯೆ ಜಾಗೃತಿ ಜಾಥಾ
ಬಳ್ಳಾರಿ, 02 ಜುಲೈ (ಹಿ.ಸ.): ಆ್ಯಂಕರ್ : ಭಾರತೀಯ ಚುನಾವಣಾ ಆಯೋಗವು ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಹಮ್ಮಿಕೊಳ್ಳಲಾಗಿರುವ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ಪ್ರಕ್ರಿಯೆ ಕುರಿತು ಪೋಷಕರಲ್ಲಿ ಅರಿವು ಮೂಡಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜು
SIR process awareness rally by college student


SIR process awareness rally by college student


SIR process awareness rally by college student


ಬಳ್ಳಾರಿ, 02 ಜುಲೈ (ಹಿ.ಸ.):

ಆ್ಯಂಕರ್ : ಭಾರತೀಯ ಚುನಾವಣಾ ಆಯೋಗವು ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಹಮ್ಮಿಕೊಳ್ಳಲಾಗಿರುವ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ಪ್ರಕ್ರಿಯೆ ಕುರಿತು ಪೋಷಕರಲ್ಲಿ ಅರಿವು ಮೂಡಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ಜಾಥಾವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ತಮ್ಮ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಎಸ್ಐಆರ್ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು.

ಇದರಿಂದ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿ ಸಿದ್ಧಗೊಳ್ಳಲು ಸಾಧ್ಯವಾಗುತ್ತದೆ. ಈ ಕುರಿತು ತಮ್ಮ ಮನೆಗಳಲ್ಲಿ ಹಾಗೂ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಂವಿಧಾನಬದ್ಧವಾಗಿ ಸಿಕ್ಕಿದೆ. 18 ವರ್ಷ ತುಂಬುವ ಯುವಕ-ಯುವತಿಯರು ಸಹ ಫಾರ್ಮ್-6 ರ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಈ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿರುವ ತಪ್ಪುಗಳ ತಿದ್ದುಪಡಿ (ಫಾರ್ಮ್-8) ಹಾಗೂ ಮರಣ ಹೊಂದಿದವರ ಅಥವಾ ಸ್ಥಳಾಂತರಗೊಂಡವರ ಹೆಸರುಗಳ ಪತ್ತೆ ಮತ್ತು ತೆಗೆದುಹಾಕುವಿಕೆಗೆ ಸಹಕರಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಸಾರ್ವಜನಿಕರು ಕಚೇರಿಗಳಿಗೆ ಅಲೆಯದೆ ವೋಟರ್ ಹೆಲ್ಪ್ ಲೈನ್ ಆಪ್ ಅಥವಾ ವೋಟರ್ ಸರ್ವೀಸ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲೇ ಸುಲಭವಾಗಿ ಮತದಾರರ ಪಟ್ಟಿ, ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಜುಲೈ 29ರ ವರೆಗೆ ಬಿಎಲ್ಓ ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಿ ಗಣತಿ ನಮೂನೆ ನೀಡಲಿದ್ದಾರೆ. ನಂತರ ಆ. 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದ ಅವರು, ಗಣತಿ ನಮೂನೆ ಭರ್ತಿ ಮಾಡುವ ಕಾರ್ಯಚಟುವಟಿಕೆ ಕುರಿತು ಸುದೀರ್ಘವಾಗಿ ವಿವರಿಸಿ, ಈ ಬಗ್ಗೆ ಪೋಷಕರಲ್ಲಿ, ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.

ಬಳಿಕ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂಶ್ ಶಿವಪುರೆ, ಜಿಪಂ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುಂಕಪ್ಪ ಸೇರಿದಂತೆ ಪ್ರಾಧ್ಯಾಪಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಕರ್ಷಕ ಘೋಷಣಾ ಫಲಕಗಳು:

ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ವಿದ್ಯಾರ್ಥಿಗಳು ಘೋಷಣಾ ಫಲಕಗಳಲ್ಲಿ ‘ಇದೀಗ ಬಂದಿದೆ. ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರತಿಯೊಬ್ಬ ಅರ್ಹ ನಾಗರಿಕ, ಒಂದು ಮತ, ಒಂದು ಗುರುತು’, ‘ದೋಷರಹಿತ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ’, ‘ಗಣತಿದಾರರ ಪ್ರತಿಯನ್ನು ದ್ವಿ-ನಮೂನೆಯಲ್ಲಿ ನೀಡಲಾಗುವುದು’, ‘ಗಣತಿ ನಮೂನೆಯಲ್ಲಿ ತಮ್ಮ ಇತ್ತೀಚಿನ ಭಾವಚಿತ್ರವನ್ನು ಬದಲಿಸಕೊಳ್ಳಬಹುದು’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು.

ಜಾಥಾವು ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜಿನ ಮುಂಭಾಗದಿಂದ ಆರಂಭಗೊಂಡು ಇಂದಿರಾ ವೃತ್ತದ ಮೂಲಕ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಮರಳಿ ಕಾಲೇಜು ಆವರಣದಕ್ಕೆ ತಲುಪಿ ಅಂತ್ಯಗೊಂಡಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande