






ಬಳ್ಳಾರಿ, 02 ಜುಲೈ (ಹಿ.ಸ.):
ಆ್ಯಂಕರ್ :
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರು ತಪ್ಪು ಮಾಹಿತಿಗೆ ಆಸ್ಪದ ನೀಡದೆ ನಿಖರವಾದ ವಿವರಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದ್ದಾರೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೀಡುವ ನಮೂನೆ ಭರ್ತಿ ಮಾಡುವ ಕುರಿತು, ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬುಧವಾರ ಸಂಜೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಹೆಸರನ್ನು ಮರುಪರಿಶೀಲಿಸಲು ಬಿಎಲ್ಒಗಳು ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಒಂದು ನಿರ್ದಿಷ್ಟ ನಮೂನೆ (ಫಾರ್ಮ್) ಅನ್ನು ನೀಡುತ್ತಾರೆ.
ಈ ಫಾರ್ಮ್ನಲ್ಲಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ನಿಮ್ಮ ಹೆಸರಿನ ವಿವರಗಳಿರುತ್ತವೆ. ಅಧಿಕಾರಿಗಳ ಬಳಿ ಈಗಾಗಲೇ ಇರುವ ಮಾಹಿತಿಯ ಜೊತೆಗೆ, ನಿಮ್ಮಲ್ಲಿಲ್ಲದ ಅಥವಾ ಪಟ್ಟಿಗೆ ಅಗತ್ಯವಿರುವ ಹೆಚ್ಚುವರಿ ವಿವರಗಳನ್ನು ನೀವು ಭರ್ತಿ ಮಾಡಿಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮಾಹಿತಿ ಭರ್ತಿ ಮಾಡಿದ ನಂತರ ಫಾರ್ಮ್ ಮೇಲೆ ನಿಮ್ಮ ಸಹಿ ಪಡೆಯಲಾಗುತ್ತದೆ. ಸಹಿ ಮಾಡಲು ಬಾರದಿದ್ದಲ್ಲಿ ಹೆಬ್ಬೆರಳಿನ ಗುರುತನ್ನು ನೀಡಲು ಅವಕಾಶವಿರುತ್ತದೆ. ಒಂದು ವೇಳೆ ಬಿಎಲ್ಒಗಳು ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಗಾಬರಿಪಡುವ ಅಗತ್ಯವಿಲ್ಲ. ಅವರು ಕನಿಷ್ಠ ಎರಡು ಬಾರಿ ನಿಮ್ಮ ಮನೆಗೆ ಮರುಭೇಟಿ ನೀಡಲಿದ್ದಾರೆ.
ಆದಾಗ್ಯೂ ನೀವು ಸಿಗದಿದ್ದರೆ, ನಿಮ್ಮ ಮನೆಯ ಬಾಗಿಲಿಗೆ ತಮ್ಮ ಪೋನ್ ನಂಬರ್ ಇರುವ ನೋಟಿಸ್ ಅಥವಾ ಫಾರ್ಮ್ ಅನ್ನು ಅಂಟಿಸಿ ಹೋಗುತ್ತಾರೆ. ನೀವು ಆ ನಂಬರ್ಗೆ ಕರೆ ಮಾಡಿ, ಅವರೊಂದಿಗೆ ಚರ್ಚಿಸಿ ಫಾರ್ಮ್ ಭರ್ತಿ ಮಾಡಬಹುದು. ಈ ಪ್ರಕ್ರಿಯೆಯು ಚಾಲ್ತಿ ತಿಂಗಳ 29ನೇ ತಾರೀಖಿನವರೆಗೆ ಮುಂದುವರಿಯಲಿದೆ ಎಂದರು.
ಈ ಪರಿಷ್ಕರಣಾ ಪ್ರಕ್ರಿಯೆಯು ಕೇವಲ ಹಾಲಿ ಮತದಾರರಿಗೆ ಮಾತ್ರ ಸೀಮಿತವಾಗಿಲ್ಲ. ಹೊಸದಾಗಿ ಹೆಸರು ಸೇರಿಸುವವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಿನ ಪರಿಷ್ಕರಣೆ ಮುಗಿದ ಒಂದು ತಿಂಗಳ ನಂತರ, ಹೊಸದಾಗಿ ವಲಸೆ ಬಂದವರು ಅಥವಾ ಮತದಾನದ ಹಕ್ಕು ಪಡೆದವರು ನಮೂನೆ-6 ಅನ್ನು ಭರ್ತಿ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇತ್ತೀಚೆಗೆ ವಿವಾಹವಾಗಿ ಹೊಸದಾಗಿ ಪತಿಯ ಮನೆಗೆ ಬಂದಿರುವ ಮಹಿಳೆಯರು, ತಮ್ಮ ತಂದೆಯ ಮನೆಯಲ್ಲಿದ್ದ ಮತದಾರರ ಗುರುತಿನ ಚೀಟಿಯ ವಿವರಗಳೊಂದಿಗೆ, ಭಾವಚಿತ್ರ ಸಹಿತ ಅರ್ಜಿಯನ್ನು ಬಿಎಲ್ಒಗಳ ಜೊತೆ ಚರ್ಚಿಸಿ ಸಲ್ಲಿಸಬೇಕು. ತನ್ಮೂಲಕ ಹಳೆಯ ಜಾಗದಿಂದ ಹೆಸರನ್ನು ತೆಗೆದು ಹೊಸ ಜಾಗಕ್ಕೆ ಸೇರಿಸಲು ಅನುಕೂಲವಾಗುತ್ತದೆ ಎಂದರು.
ಹಲವು ವರ್ಷಗಳ ಹಿಂದೆ ಮತದಾರರ ಪಟ್ಟಿಗೆ ಸೇರಿದವರ ಗುರುತಿನ ಚೀಟಿಯಲ್ಲಿ ಬಾಲ್ಯದ ಅಥವಾ ಹಳೆಯ ಭಾವಚಿತ್ರಗಳಿರುತ್ತವೆ. ಪ್ರಸ್ತುತ ಮುಖಚರ್ಯೆಗೆ ಹೊಂದುವಂತೆ ಹೊಸ ಫೋಟೋವನ್ನು ಅಪ್ಡೇಟ್ ಮಾಡಲು ಈ ಪ್ರಕ್ರಿಯೆಯಲ್ಲಿ ಅವಕಾಶವಿದೆ. ಸಾರ್ವಜನಿಕರು ಬಿಎಲ್ಒಗಳು ಕೇಳಿದಾಗ ಎರಡು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡುವ ಮೂಲಕ ಪಟ್ಟಿಯಲ್ಲಿ ತಮ್ಮ ಹೊಸ ಫೋಟೋವನ್ನು ಅಳವಡಿಸಿಕೊಳ್ಳಬಹುದು ಎಂದರು.
ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಯಾವುದೇ ಕಾರಣಕ್ಕೂ ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿಯಾಗಿದೆ. ಹಾಗಾಗಿ, ನಿಮ್ಮ ಏರಿಯಾದ ಬಿಎಲ್ಒಗಳು ಮನೆಗೆ ಬಂದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಕೋರಿದರು.
ಬಳಿಕ ಕಾಲೋನಿಯ ನಿವಾಸಿಯಾದ ಈ.ಕೃಷ್ಣ ಮತ್ತು ಪತ್ನಿ ನಾಗಲಕ್ಷ್ಮಿ ಅವರಿಗೆ ಸೆಲ್ಫ್ ಎನ್ಯುಮರೇಶನ್ ಫಾರ್ಮ್ ವಿತರಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಯವರು ಸಾರ್ವಜನಿಕರ ಆಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಪಂ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ನಿರಂಜನ್ ಸೇರಿದಂತೆ ಬಿಎಲ್ಓ ಅಧಿಕಾರಿಗಳು, ಬಿಎಲ್ಎ ಏಜೆಂಟ್ ಹಾಗೂ ಸಾರ್ವಜನಿಕರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್