
ಗದಗ, 02 ಜುಲೈ (ಹಿ.ಸ.)
ಆ್ಯಂಕರ್:- ವಚನ ಸಾಹಿತ್ಯದ ಸಂರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯು ಪ್ರತಿಯೊಬ್ಬರಿಗೂ ವಚನಗಳ ಮಹತ್ವವನ್ನು ನೆನಪಿಸುವ ಪವಿತ್ರ ದಿನವಾಗಿದೆ. ಹಳಕಟ್ಟಿ ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಎಸ್. ವಿ. ಸಂಕನೂರು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಇವರುಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿಂದು ಜರುಗಿದ ಡಾ. ಫ. ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ಯ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ 2026 ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ತಾಳೆಗರಿ, ಓಲೆಗರಿಗಳಲ್ಲಿ ಬರೆದಿಟ್ಟಿದ್ದ ವಚನಗಳನ್ನು ಕಡುಬಡತನ ಮತ್ತು ಕಷ್ಟದ ಕಾಲದಲ್ಲೂ ಊರೂರು ಅಲೆದು ಸಂಗ್ರಹಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕಾಗಿ ಅವರನ್ನು ‘ವಚನ ಪಿತಾಮಹ’ ಎಂದು ಗೌರವಿಸಲಾಗುತ್ತದೆ. ವಕೀಲಿ ವೃತ್ತಿಯನ್ನು ಬದಿಗಿಟ್ಟು, ಸೈಕಲ್ ಮೇಲೆ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಸಾವಿರಾರು ವಚನಗಳನ್ನು ಅವರು ಸಂರಕ್ಷಿಸಿದರು. ವಚನಗಳ ಮುದ್ರಣಕ್ಕಾಗಿ ಸ್ವಂತ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಹಳಕಟ್ಟಿಯವರು ಕೇವಲ ಸಾಹಿತ್ಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ, ಬಿಜಾಪುರದಲ್ಲಿ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿಎಲ್ಡಿಇ) ಶಿಕ್ಷಣ ಸಂಸ್ಥೆ, ಸಿದ್ದೇಶ್ವರ ಬ್ಯಾಂಕ್ ಹಾಗೂ ರೈತರು ಮತ್ತು ನೇಕಾರರ ಅನುಕೂಲಕ್ಕಾಗಿ ವಿವಿಧ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಸಮಾಜದ ಏಳಿಗೆಗೆ ಶ್ರಮಿಸಿದವರು ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಕೇವಲ ಓದುವುದಷ್ಟೇ ಅಲ್ಲದೆ, ಜೀವನದಲ್ಲಿ ಪಾಲಿಸಬೇಕು. ಶರಣರು ಹೇಳಿದ 'ಕಳಬೇಡ, ಕೊಲಬೇಡ, ಮುನಿಯಬೇಡ...' ಎಂಬ ಒಂದು ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನಾವು ಉತ್ತಮ ನಾಗರಿಕರಾಗಲು ಮತ್ತು ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಸಂಕನೂರು ಅವರು ಹೇಳಿದರು.
ಶರಣ ತತ್ವ ಚಿಂತಕರಾದ ಅಶೋಕ ಬರಗುಂಡಿ ಅವರು ಮಾತನಾಡಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ತಮ್ಮ ಸ್ವಂತ ಬದುಕನ್ನು ಲೆಕ್ಕಿಸದೆ ವಚನ ಸಾಹಿತ್ಯದ ಉಳಿವಿಗಾಗಿ ನಡೆಸಿದ ಹೋರಾಟ ಮತ್ತು ಸಮರ್ಪಣಾ ಮನೋಭಾವ ಅನನ್ಯವಾದುದು. ವಚನಗಳು ಕೇವಲ ಓದುವ ಗ್ರಂಥಗಳಲ್ಲ, ಅವು ನಮ್ಮ ದೈನಂದಿನ ಬದುಕಿನ ದಾರಿಯಾಗಬೇಕು ಎಂದು ಶರಣತತ್ವ ಚಿಂತಕರಾದ ಅಶೋಕ್ ಬರಗುಂಡಿ ಅವರು ತಿಳಿಸಿದರು.
ಶರಣ ಕಾಯಕದ ಎಲ್ಲಾ ಶರಣರನ್ನು ಸ್ಮರಿಸುತ್ತಾ, ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ 2026ರ ಅಂಗವಾಗಿ ಹಮ್ಮಿಕೊಂಡಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯಲ್ಲಿ ಆಶಯ ನುಡಿಗಳನ್ನು ಆಡಿದರು, ಅಲ್ಲಮಪ್ರಭುಗಳು ಒಂದೆಡೆ ಬಸವಣ್ಣನವರನ್ನು ಕುರಿತು ಬಸವಣ್ಣ ನೀನು ಯುಗದ ಉತ್ಸಾಹ, ನಿನ್ನ ನೆನೆವುದೊಂದು ಸುಖದ ಸಮುದ್ರ ಎಂದು ಕೊಂಡಾಡಿದ್ದಾರೆ. ಅಂತಹ ಸುಖದ ಸಮುದ್ರದ ಅನಂತತೆಯಲ್ಲಿ ತೇಲಾಡಿ, ಪ್ರಸನ್ನ ಭಾವದಿಂದ ಬದುಕಿದ್ದ ಸಾಂಸ್ಕೃತಿಕ ಶರಣ ಸಮುದಾಯದ ಇತಿಹಾಸವು ಕಲ್ಯಾಣ ಕ್ರಾಂತಿಯ ನಂತರ ಚದುರಿಹೋಗಿತ್ತು. ನಶಿಸಿಹೋಗುತ್ತಿದ್ದ ವಚನ ಸಾಮ್ರಾಜ್ಯದ ಕನಸುಗಳಿಗೆ ಗರಿಷ್ಠ ಮಹತ್ವವನ್ನು ಕೊಟ್ಟು, ಅಂತಹ ಸುಖದ ಸಮುದ್ರವನ್ನು ಮತ್ತೆ ನಮಗೆ ದೊರಕಿಸಿಕೊಟ್ಟ ಪುಣ್ಯಾತ್ಮ ಡಾ. ಫ. ಗು. ಹಳಕಟ್ಟಿಯವರು ಎಂದು ಡಾ. ಎಂ. ಎಂ. ಕಲಬುರ್ಗಿಯವರು ಜ್ಞಾಪಿಸಿಕೊಂಡಿದ್ದಾರೆ. ಹಳಕಟ್ಟಿಯವರ ಅದ್ಬುತ ಪ್ರತಿಭೆಯ ಪರಿಣಾಮವಾಗಿ 15 ಸಂಪುಟಗಳು ಪ್ರಕಟಗೊಂಡಿದ್ದು, ಶಿವಾನುಭವದ 35 ಸಂಪುಟಗಳು ಹೊರಬಂದಿವೆ ಎಂದು ಹೇಳಿದರು.
1880 ಜುಲೈ 2 ರಂದು ಗುರುಬಸಪ್ಪ ಮತ್ತು ದಾನಮ್ಮ ತಾಯಿಯ ಉದರದಲ್ಲಿ ಜನಿಸಿದ ಹಳಕಟ್ಟಿಯವರು ಧಾರವಾಡದಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದರು , 1896ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದ ಹಳಕಟ್ಟಿಯವರು, ಲಿಂಗಾಯತ ಧರ್ಮಕ್ಕೆ ಆತ್ಮಗೌರವ ಹಾಗೂ ಅಸ್ಮಿತೆಯ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಅವರು ಇಲ್ಲದಿದ್ದರೆ ನಾವ್ಯಾರೂ ಆತ್ಮಗೌರವದಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಹಳಕಟ್ಟಿ ಫಕೀರಪ್ಪನವರು (ಫ.ಗು.ಹಳಕಟ್ಟಿ) ಎಂದಾಕ್ಷಣ ಅವರ ಕುಟುಂಬದ ನಾಲ್ಕು ಹೆಸರುಗಳನ್ನು ನೆನೆಯಬೇಕು. ಅವರ ತಂದೆ ಗುರುಬಸಪ್ಪನವರು ಧಾರವಾಡದ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದು, 25 ವರ್ಷಗಳ ಕಾಲ ಪಠ್ಯಪುಸ್ತಕಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹಾನ್ ಕನ್ನಡಾಭಿಮಾನಿ. ಹಳಕಟ್ಟಿಯವರ ಸೋದರ ಮಾವಂದಿರಾದ ತಮ್ಮಣ್ಣಪ್ಪ ಮತ್ತು ಪಂಡಿತಪ್ಪ ಚಿಕ್ಕೋಡಿಯವರ ಕೊಡುಗೆಯೂ ಅನನ್ಯವಾದುದು. ಪಂಡಿತಪ್ಪ ಚಿಕ್ಕೋಡಿಯವರು ಕೆ.ಎಲ್.ಇ ಸಂಸ್ಥೆಯನ್ನು ಸ್ಥಾಪಿಸಿದ ಸಪ್ತರ್ಷಿಗಳಲ್ಲಿ ಒಬ್ಬರು ಹಾಗೂ 1933ರ ಮುಂಬೈ ಬ್ರಾಹ್ಮಣೇತರ ಯುವಕ ಪರಿಷತ್ತಿನ ಮಹಾ ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಪಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರಬುದ್ಧ ಚಿಂತಕರು. ತಮ್ಮಣ್ಣಪ್ಪ ಚಿಕ್ಕೋಡಿಯವರು ಹಳಕಟ್ಟಿಯವರಿಗೆ ತಮ್ಮ ಮಗಳಾದ ಭಾಗೀರಥಿಯನ್ನು ಕೊಟ್ಟು ಮದುವೆ ಮಾಡಿದ್ದಲ್ಲದೆ, ಹಳಕಟ್ಟಿಯವರು ಕೋಟ್ಯಂತರ ರೂಪಾಯಿ ಗಳಿಸಬಹುದಾಗಿದ್ದ ವಕೀಲಿ ವೃತ್ತಿಯನ್ನು ತೊರೆದು ವಚನ ಶಾಸ್ತ್ರದ ಸಂಶೋಧನೆಗೆ ಇಳಿದಾಗ, ತಮ್ಮ ಇಡೀ ಸಂಪತ್ತನ್ನು ಅದಕ್ಕಾಗಿ ಧಾರೆ ಎರೆದು ಪ್ರೋತ್ಸಾಹಿಸಿದ ಪುಣ್ಯಾತ್ಮರು ಎಂದರು.
ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗಲೂ ಹಳಕಟ್ಟಿಯವರಿಗೆ ತಮ್ಮ ಧರ್ಮದ ಇತಿಹಾಸವನ್ನು ಹುಡುಕುವ ಹಂಬಲವಿತ್ತು. 1902ರಲ್ಲಿ ಬಿ.ಎ ಪಾಸಾದ ನಂತರ ಅವರು ತಮ್ಮ ಧರ್ಮದ ಸಾಹಿತ್ಯವನ್ನು ಹುಡುಕುತ್ತಾ ಹೋದಾಗ ಮೊದಲು ಸಿಕ್ಕಿದ್ದು ಬಸವ ಪುರಾಣ ಮತ್ತು ಚೆನ್ನಬಸವ ಪುರಾಣಗಳು. ಆದರೆ ಇವುಗಳಲ್ಲಿ ತತ್ವಕ್ಕಿಂತ ಕಥೆಗಳೇ ಹೆಚ್ಚಾಗಿದ್ದರಿಂದ ಅವರಿಗೆ ಭ್ರಮನಿರಸನವಾಯಿತು. ನಂತರದ ದಿನಗಳಲ್ಲಿ ಹಾಲಭಾವಿ ವೀರಭದ್ರಪ್ಪನವರು ತಂದುಕೊಟ್ಟ ಚಾಮರಸನ ‘ಪ್ರಭುಲಿಂಗಲೀಲೆ’ ಮತ್ತು ‘ಗಣಭಾಷಿತ ರತ್ನಮಾಲೆ’ ಗ್ರಂಥಗಳನ್ನು ಓದಿದಾಗ ಹಳಕಟ್ಟಿಯವರು ಆನಂದತುಂದಿಲರಾದರು. ಅಲ್ಲಿ ಬಿಡಿಬಿಡಿಯಾಗಿ ವಚನಗಳು ಇರುವುದನ್ನು ಕಂಡುಹಿಡಿದು, ವಚನಗಳ ಆಕರಗಳನ್ನು ಬರೆದಿಟ್ಟುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡರು.
ವೈಯಕ್ತಿಕ ಸುಖಭೋಗಗಳ ಲಾಲಸೆಗೆ ಬೀಳದೆ, ಸಮಾಜದ ಹಿತಕ್ಕಾಗಿ ಸ್ವಾವಲಂಬಿಯಾಗಿ ಬದುಕಿದ ಹಳಕಟ್ಟಿಯವರು ಗುಣಗ್ರಾಹಿತ್ವ ಮತ್ತು ಸತ್ಯದ ಆಲೋಚನೆಗಳನ್ನು ಇಂದಿನ ಸಮಾಜವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಶರಣ ತತ್ವ ಚಿಂತಕರು ಕರೆ ನೀಡಿದರು.
ಧಾರವಾಡದ ಶಿವಲಿಂಗಪ್ಪ ಮಂಚಾಲಿಯವರ ಮನೆಯಲ್ಲಿ ಫ.ಗು. ಹಳಕಟ್ಟಿಯವರು ಮೊದಲ ಬಾರಿಗೆ ನೂರಾರು ಕಟ್ಟುಗಳಲ್ಲಿದ್ದ ಸಾವಿರಾರು ತಾಳೆಗರಿಗಳ ರಾಶಿಯನ್ನು ನೋಡಿದಾಗ ರೋಮಾಂಚನಗೊಂಡರು. ವಚನ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ಹತಾಶರಾಗಿದ್ದ ಕಾಲದಲ್ಲಿ, ಆ ತಾಳೆಗರಿಗಳಲ್ಲಿ ಅಡಗಿದ್ದ ವಚನಗಳನ್ನು ಕಂಡು ಹಳಕಟ್ಟಿಯವರು ಅವುಗಳ ಸಂಸ್ಕರಣೆ ಹಾಗೂ ಸಂಶೋಧನೆಯ ನಿರಂತರ ಕೆಲಸವನ್ನು ಅಲ್ಲಿಂದಲೇ ಪ್ರಾರಂಭಿಸಿದರು ಎಂದು ಬರಗುಂಡಿ ನೆನಪಿಸಿಕೊಂಡರು.
1926ರವರೆಗೆ ಬಿಜಾಪುರದಲ್ಲಿ ಬುದ್ಧಿವಂತ ವಕೀಲರಾಗಿ ಲಕ್ಷಗಟ್ಟಲೆ ಹಣ ಗಳಿಸುವ ಸಾಮರ್ಥ್ಯವಿದ್ದರೂ, ಹಳಕಟ್ಟಿಯವರು ವಚನಗಳ ಬೆನ್ನತ್ತಿದರು. ಕಕ್ಷಿದಾರರ ಮನೆಗಳಿಗೆ ಹೋಗಿ ವಚನ ಗ್ರಂಥಗಳನ್ನು ಸಂಗ್ರಹಿಸುತ್ತಿದ್ದಾಗ ಜನರು ಅವರನ್ನು ಫಕೀರನಾಗುತ್ತಿದ್ದಾನೆ ಎಂದು ಹಾಸ್ಯ ಮಾಡಿದ್ದರು. ಆದರೆ, ನಾನು ಫಕೀರನಾದರೂ ಚಿಂತೆಯಿಲ್ಲ, ನನ್ನ ಜನರನ್ನು ಮಾತ್ರ ಫಕೀರರನ್ನಾಗಿ ಮಾಡಲು ಬಿಡುವುದಿಲ್ಲ ಎನ್ನುವ ದೃಢ ಸಂಕಲ್ಪದೊಂದಿಗೆ ಸುಮಾರು ಸಾವಿರ ವಚನ ಕಟ್ಟುಗಳನ್ನು ಅವರು ಸಂಗ್ರಹಿಸಿದರು.
1904ರ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ತೀರ್ಮಾನಗಳು ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗೆ ಮಹತ್ವ ನೀಡಿದಾಗ, ಲಿಂಗಾಯತ ಸಂಸ್ಕೃತಿ ಮತ್ತು ವಚನ ಸಾಹಿತ್ಯದ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದಿದ್ದಾಗ ಹಳಕಟ್ಟಿಯವರು ಚಿಂತಿತರಾದರು. ಕೇವಲ ಬಹಿರಂಗ ಸೌಲತ್ತುಗಳಿಗಿಂತ ಆತ್ಮವಿಶ್ವಾಸದ ತತ್ವ ಮುಖ್ಯವೆಂದು ನಂಬಿದ ಅವರು, ಸಂಸ್ಥೆಗಳು ಮಾಡದ ಕೆಲಸದ ಮಹತ್ಕಾರ್ಯವನ್ನು ಒಬ್ಬರೇ ಹೆಗಲಿಗೇರಿಸಿಕೊಂಡರು.
ಮಂಗಳೂರಿನ ಬಾಸೆಲ್ ಮಿಷನ್ನವರು ವಚನಗಳನ್ನು ಪ್ರಿಂಟ್ ಮಾಡಲು ನಿರಾಕರಿಸಿದಾಗಲೂ ಧೃತಿಗೆಡದ ಹಳಕಟ್ಟಿಯವರು, ವಚನ ಶಾಸ್ತ್ರ ಸಾರದ ಹಸ್ತಪ್ರತಿಯನ್ನು ಸಿದ್ಧಪಡಿಸಿದರು. ತಾವು ಸಂಗ್ರಹಿಸಿದ 2,665 ವಚನಗಳನ್ನು 232 ಶಿರೋನಾಮೆಗಳ ಅಡಿಯಲ್ಲಿ ವೈಜ್ಞಾನಿಕವಾಗಿ ವರ್ಗೀಕರಿಸಲು ಬರೋಬ್ಬರಿ 10 ವರ್ಷಗಳ ಕಾಲ ಶ್ರಮಿಸಿದರು. ಶಿವಶರಣರ ಸ್ತ್ರೀ ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಜಾತಿ ಪದ್ಧತಿಯ ವಿರೋಧ ಹಾಗೂ ಕಾಯಕ ತತ್ವಗಳ ಅರಿವಿನ ಹಿನ್ನೆಲೆಯಲ್ಲಿ ಈ ಜೋಡಣೆ ಮಾಡಲಾಗಿತ್ತು.
ವಚನಗಳ ಜೋಡಣೆಗಾಗಿ ಹಳಕಟ್ಟಿಯವರು ಕೇವಲ ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಲಿಲ್ಲ, ಬದಲಿಗೆ ವ್ಯಾಸ ಸೂತ್ರಗಳು, ಉಪನಿಷತ್ತುಗಳು, ಪುರಾಣಗಳು, ಆಧುನಿಕ ಆರ್ಯ ಸಮಾಜದ 'ಸತ್ಯಾರ್ಥ ಪ್ರದೀಪಿಕೆ', ಬ್ರಹ್ಮ ಸಮಾಜ, ರಾಮಕೃಷ್ಣ ಮಿಷನ್ ಹಾಗೂ ವಿವೇಕಾನಂದರ ವಿಚಾರಧಾರೆಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ಕೊನೆಗೆ, ವಚನಗಳಿಗೆ ಶ್ರೇಣೀಕೃತ ವ್ಯವಸ್ಥೆಯ ಪುರಾಣಗಳಾಗಲಿ ಅಥವಾ ಕೇವಲ ಜ್ಞಾನಮುಖಿ ಉಪನಿಷತ್ತುಗಳಾಗಲಿ ಸಾಟಿಯಾಗಲಾರವು ಎಂದು ಮನಗಂಡು, ಮಧ್ಯೆವಾಳದೇವನ 'ಶಿವಾನುಭವ ಸೂತ್ರ', 'ಕರ್ಣಹಸಿಗೆ' ಮತ್ತು 'ಘಟಚಕ್ರ'ಗಳ ಶಾಸ್ತ್ರೀಯ ಚೌಕಟ್ಟಿನ ಆಧಾರದ ಮೇಲೆ ವಚನಗಳನ್ನು ಜೋಡಿಸಿದರು.
ಇಲೆಕ್ಟ್ರಾನಿಕ್ ಮಾಧ್ಯಮಗಳಿರುವ ಇಂದಿನ ಕಾಲದಲ್ಲೇ ನಮಗೆ ಓದುವುದು ಕಷ್ಟವಿರುವಾಗ, ಯಾವುದೇ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಹಳಕಟ್ಟಿಯವರು ಅಕ್ಷರಗಳನ್ನು ತಿದ್ದಿ, ಪಾಠಾಂತರಗಳನ್ನು ಸರಿಪಡಿಸಿ ವಚನಗಳನ್ನು ನೈತಿಕ, ಬೌದ್ಧಿಕ ಹಾಗೂ ಆಚರಣೆಯ ವಿಭಾಗಗಳಾಗಿ ವರ್ಗೀಕರಿಸಿದ ಶ್ರಮ ಅಸಾಮಾನ್ಯವಾದದ್ದು. ಅದಕ್ಕಾಗಿಯೇ ಸರ್ಕಾರ ಇದನ್ನು 'ವಚನ ಸಾಹಿತ್ಯ ಸಂರಕ್ಷಣಾ ದಿನ' ಎಂದು ಘೋಷಿಸಿದೆ ಎಂದು ಅಶೋಕ ಬರಗುಂಡಿ ತಿಳಿಸಿದರು.
1925ರ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಹಳಕಟ್ಟಿಯವರ ವಚನ ಶಾಸ್ತ್ರ ಸಾರ ಗ್ರಂಥದ ಮಹತ್ವವನ್ನು ಕವಿ ಕೆ.ಪಿ. ಪುಟ್ಟಣ್ಣ ಶೆಟ್ಟರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ತಮಿಳುನಾಡಿನ ಮಹಾ ವಿದ್ವಾಂಸರು ಇದನ್ನು 'ಐದನೇ ವೇದ'ವನ್ನು ಮೀರಿದ ಮಹಾಗ್ರಂಥ ಎಂದು ಕೊಂಡಾಡಿದ್ದನ್ನು ಬರಗುಂಡಿ ನೆನಪಿಸಿಕೊಂಡರು.
ಹಳಕಟ್ಟಿಯವರ ಸಂಶೋಧನೆಯ ಮುನ್ನ ಕೇವಲ 40-45 ಶರಣರ ಹೆಸರುಗಳು ಮಾತ್ರ ಲಭ್ಯವಿದ್ದವು. ಆದರೆ ಅವರ ನಿರಂತರ ಶ್ರಮದ ಫಲವಾಗಿ 250ಕ್ಕೂ ಹೆಚ್ಚು ವಚನಕಾರರ ಅಮೂಲ್ಯ ಇತಿಹಾಸ ಜಗತ್ತಿಗೆ ಪರಿಚಯವಾಯಿತು. ವಚನಗಳನ್ನು ಮುದ್ರಿಸಲು ಆರ್ಥಿಕ ಮುಗ್ಗಟ್ಟು ಎದುರಾದಾಗ, ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನೇ ಮಾರಿ 'ಹಿತಚಿಂತಕ' ಮುದ್ರಣಾಲಯವನ್ನು ಆರಂಭಿಸಿದರು. 'ನವಕರ್ನಾಟಕ' ವಾರಪತ್ರಿಕೆಯ ಮೂಲಕ 25 ವರ್ಷಗಳ ಕಾಲ ಸತತವಾಗಿ ಶರಣ ತತ್ವಗಳನ್ನು ಪ್ರಸಾರ ಮಾಡಿದರು.
ಹಳಕಟ್ಟಿಯವರು ತಮ್ಮ ಜೀವನದಲ್ಲಿ ಮಗನನ್ನು ಕಳೆದುಕೊಂಡರು, ಕೈಕಾಲು ಮುರಿದುಕೊಂಡರು, ಕಡು ಬಡತನವನ್ನು ಅನುಭವಿಸಿದರು. ಆದರೆ ಒಂದು ಕ್ಷಣವೂ ವಚನ ಸಂಶೋಧನೆಯಿಂದ ದೂರ ಸರಿಯಲಿಲ್ಲ. ಸುಮಾರು 25,000 ಪುಟಗಳಷ್ಟು ವಚನ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾತ್ಮ ಅವರು.
ಕಾಲ್ಪನಿಕ ದೇವತೆಗಳ ಸ್ತುತಿಗಿಂತ, ನೈತಿಕತೆಯನ್ನು ಬೋಧಿಸುವ ವಚನಗಳ ಮುಖಾಂತರವೇ ನಮ್ಮ ಮನೆ ಮತ್ತು ಸಮಾಜದ ಎಲ್ಲಾ ಶುಭ ಕಾರ್ಯಕ್ರಮಗಳು ಆರಂಭ ಹಾಗೂ ಅಂತ್ಯಗೊಳ್ಳಬೇಕು. ಸಮಾಜದ ಹಿತಚಿಂತಕರು, ಶ್ರೀಮಂತರು ಮತ್ತು ಸ್ವಾಮೀಜಿಗಳು ವಚನ ಸಾಹಿತ್ಯದ ಪ್ರಸಾರಕ್ಕಾಗಿ ತಮ್ಮ ಸಂಪತ್ತನ್ನು ಧಾರೆ ಎರೆಯಬೇಕು. ಈ ಸಂಸ್ಕೃತಿ ಪ್ರತಿಯೊಬ್ಬರ ಮನೆ ಮನಗಳನ್ನು ಬೆಳಗಬೇಕು.
ಹಳಕಟ್ಟಿಯವರ ಕೊನೆಯ ಸಂದೇಶದಂತೆ, ನನ್ನನ್ನು ಹೊಗಳಬೇಡಿ, ನನ್ನನ್ನು ನೆನೆಯಬೇಡಿ; ನನ್ನನ್ನು ಹೊಗಳುವ ಬದಲಾಗಿ ವಚನಗಳ ಪ್ರಕಾರ ಬದುಕಿ ಎಂಬ ತತ್ವವನ್ನು ನಾವೆಲ್ಲರೂ ಪಾಲಿಸೋಣ. ಲಿಂಗಾಯತ ಸಂಸ್ಕೃತಿ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ವಿಶ್ವಬಂಧುತ್ವದ ಸಂಸ್ಕೃತಿಯಾಗಿದೆ ಎಂದು ಬರಗುಂಡಿ ಒತ್ತಿ ಹೇಳಿದರು.
ಇದೆ ಸಂದರ್ಭದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ನಿಮಿತ್ಯ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ 2026 ಕುರಿತು ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ತಂಡದವರಿಂದ ನಾಡಗೀತೆ ಪ್ರಸ್ತುತ ಪಡಿಸಿದರು. ಆರ್.ಬಿ ಚಿನ್ನವಾಲರ್ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವ್ಹಿ. ಬಳ್ಳಾರಿ, ಶರಣ ಸಾಹಿತ್ಯ ಚಿಂತಕರಾದ ಬಳಿಗಾರ್, ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯ ಶಂಕರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP