
ವಿಜಯಪುರ, 02 ಜುಲೈ (ಹಿ.ಸ.)
ಆ್ಯಂಕರ್ : ಚುನಾವಣಾ ಮತದಾರರ ವಿಶೇಷ ಪರಿಷ್ಕರಣೆ ಕುರಿತು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಗಠಾಣ ವಿಧಾನಸಭಾ ಕ್ಷೇತ್ರದ ಶಾಸಕ ವಿಠಲ್ ಕಟಕದೊಂಡಾ, ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮತದಾರರ ಪಟ್ಟಿಯನ್ನು ಸಂಪೂರ್ಣ ನಿಖರ, ಪಾರದರ್ಶಕ ಹಾಗೂ ದೋಷರಹಿತವಾಗಿಸುವ ಉದ್ದೇಶದಿಂದ ಚುನಾವಣಾ ಆಯೋಗ ವಿಶೇಷ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ, ಮರಣ ಹೊಂದಿದವರ ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕುವುದು, ಹೆಸರು, ವಿಳಾಸ ಹಾಗೂ ಇತರೆ ಮಾಹಿತಿಗಳ ತಿದ್ದುಪಡಿ ಸೇರಿದಂತೆ ಎಲ್ಲ ಅಗತ್ಯ ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಪ್ರಜಾಪ್ರಭುತ್ವದ ಯಶಸ್ಸಿಗೆ ಶುದ್ಧ ಮತ್ತು ನಿಖರ ಮತದಾರರ ಪಟ್ಟಿಯೇ ಮೂಲ ಆಧಾರವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ಸಂರಕ್ಷಿತವಾಗಿರಬೇಕು. ಈ ಹಿನ್ನೆಲೆಯಲ್ಲಿ ಯುವ ಮತದಾರರು, ಮಹಿಳೆಯರು ಹಾಗೂ ಮೊದಲ ಬಾರಿಗೆ ಮತದಾನದ ಅರ್ಹತೆ ಪಡೆದವರು ಕಡ್ಡಾಯವಾಗಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಂಡು ಅಗತ್ಯವಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಚುನಾವಣಾ ಅಧಿಕಾರಿಗಳೊಂದಿಗೆ ಸಹಕರಿಸಿ, ನಿಖರ ಮಾಹಿತಿಯನ್ನು ಒದಗಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಇದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಜಾಗೃತ ನಾಗರಿಕ – ಸದೃಢ ಪ್ರಜಾಪ್ರಭುತ್ವ ಹಾಗೂ ನಿಖರ ಮತದಾರರ ಪಟ್ಟಿ – ಬಲಿಷ್ಠ ಭಾರತದ ಅಡಿಪಾಯ ಎಂಬ ಸಂದೇಶದೊಂದಿಗೆ ಪ್ರತಿಯೊಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಶಾಸಕ ವಿಠಲ್ ಕಟಕದೊಂಡಾ ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande