

ಬಳ್ಳಾರಿ, 02 ಜುಲೈ (ಹಿ.ಸ.)
ಆ್ಯಂಕರ್ :
ಬಳ್ಳಾರಿಯ ಪ್ರತಿಷ್ಠಿತ ಪ್ಯೂಪುಲ್ ಟ್ರೀ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಪ್ರೇಮ ಸಂಬಂಧ ಬೆಳೆಸಿ, ದೈಹಿಕ ಸಂಪರ್ಕ ಹೊಂದಿದ ಹಾಗೂ ವಿವಾಹಿತ ಎಂಬ ವಿಚಾರವನ್ನು ಮುಚ್ಚಿಟ್ಟು ವಂಚನೆ ಎಸಗಿದ ಆರೋಪದ ಮೇಲೆ ಕಾಲೇಜಿನ ಬಾಟನಿ ಉಪನ್ಯಾಸಕ ಜಿ. ರವಿಕಿರಣ್ (45) ಅವರನ್ನು ಮಹಿಳಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಕುಲಕರ್ಣಿ ನೀಡಿದ ಮಾಹಿತಿಯಂತೆ, ಆರೋಪಿಯು ಮೂಲತಃ ತಿರುಪತಿ ನಿವಾಸಿಯಾಗಿದ್ದು, ವಿವಾಹಿತನಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಅವರು ಪ್ಯೂಪುಲ್ ಟ್ರೀ ಪಿಯು ಕಾಲೇಜಿನಲ್ಲಿ ಬಾಟನಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜು ಆವರಣದಲ್ಲೇ ವಾಸವಾಗಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಿಂದ ಉಪನ್ಯಾಸಕ ಮತ್ತು ವಿದ್ಯಾರ್ಥಿನಿಯ ನಡುವೆ ಮೊಬೈಲ್ ಮೂಲಕ ಚಾಟಿಂಗ್ ಆರಂಭವಾಗಿದ್ದು, 2026ರ ಫೆಬ್ರವರಿಯಲ್ಲಿ ಅದು ಪ್ರೇಮ ಸಂಬಂಧಕ್ಕೆ ತಿರುಗಿದೆ. ನಂತರ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ನಿರ್ಜನ ಪ್ರದೇಶದಲ್ಲಿ ಉಪನ್ಯಾಸಕನ ಕಾರಿನ ಹಿಂಭಾಗದ ಸೀಟಿನಲ್ಲಿ ದೈಹಿಕ ಸಂಪರ್ಕ ನಡೆದಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ.
ಇದಲ್ಲದೆ, ತಾನು ಅವಿವಾಹಿತ ಎಂದು ನಂಬಿಸಿ ಪ್ರೇಮ ಸಂಬಂಧ ಬೆಳೆಸಿದ್ದ ಉಪನ್ಯಾಸಕ ವಾಸ್ತವವಾಗಿ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆ ಎಂಬುದು ನಂತರ ತಿಳಿದುಬಂದಿದೆ. ಇದರಿಂದ ವಂಚನೆಗೊಳಗಾಗಿರುವುದಾಗಿ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್-2023ರ ಕಲಂ 64(2)(ಎಂ), 64(2)(ಐ), 69, 351(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 66(ಇ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಇದೇ ವೇಳೆ, ಪ್ರಕರಣ ಬೆಳಕಿಗೆ ಬಂದ ನಂತರ ಉಪನ್ಯಾಸಕ ಜಿ. ರವಿಕಿರಣ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪ್ಯೂಪುಲ್ ಟ್ರೀ ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ, ಈ ಮೂಲಕ ಕಾಲೇಜು ಆಡಳಿತ ಪ್ರಕರಣದಿಂದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್