ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ವಿಜಯಪುರ, 02 ಜುಲೈ (ಹಿ.ಸ.) ಆಂಕರ್ : ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಲೋಕಾಯುಕ್ತ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ನಗರದ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮೇಲೆ ಬುಧವಾರ ದಿಢೀರ್ ದಾಳಿ ನಡೆಸಿದರು. ಕಾರ್ಯಾಚರ
ದಾಳಿ


ವಿಜಯಪುರ, 02 ಜುಲೈ (ಹಿ.ಸ.)

ಆಂಕರ್ : ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಲೋಕಾಯುಕ್ತ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ನಗರದ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮೇಲೆ ಬುಧವಾರ ದಿಢೀರ್ ದಾಳಿ ನಡೆಸಿದರು.

ಕಾರ್ಯಾಚರಣೆಯ ವೇಳೆ ಕಚೇರಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದರೆಂದು ಶಂಕಿಸಲಾದ ₹50 ಸಾವಿರಕ್ಕೂ ಅಧಿಕ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಕಚೇರಿಗೆ ಸಂಬಂಧಿಸದ ಐವರು ಖಾಸಗಿ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಈ ದಿಢೀರ್ ದಾಳಿಯಿಂದ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ತಮ್ಮ ಕೆಲಸಕ್ಕಾಗಿ ಆಗಮಿಸಿದ್ದ ಜನರು ಕುತೂಹಲದಿಂದ ಬೆಳವಣಿಗೆಗಳನ್ನು ಗಮನಿಸಿದರು. ದಾಳಿಯ ವೇಳೆ ಕಚೇರಿಯೊಳಗೆ ಇದ್ದ ಬಾಂಡ್ ರೈಟರ್ಗಳು ಹಾಗೂ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವ್ಯಕ್ತಿಗಳನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು.

ಕಚೇರಿಯಲ್ಲಿದ್ದ ಪ್ರಮುಖ ಕಡತಗಳು, ನೋಂದಣಿ ಸಂಬಂಧಿತ ದಾಖಲೆಗಳು ಹಾಗೂ ಏಜೆಂಟರ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ ಕಚೇರಿಯ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಹಲವು ದಾಖಲೆಗಳನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ಸಾರ್ವಜನಿಕರಿಂದ ನಿರಂತರವಾಗಿ ಬಂದಿದ್ದ ದೂರುಗಳು ಹಾಗೂ ಕಚೇರಿಯಲ್ಲಿ ಲಂಚದ ವ್ಯವಹಾರಗಳು ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪನೋಂದಣಿ ಸೇವೆಗಳಿಗೆ ಸಾರ್ವಜನಿಕರಿಂದ ಅನಧಿಕೃತ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಲೋಕಾಯುಕ್ತ ಎಸ್.ಪಿ. ಟಿ. ಮಲ್ಲೇಶಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ ಆನಂದ ಠಕ್ಕಣ್ಣನವರ, ಆನಂದ ಡೋಣಿ ಹಾಗೂ ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.

ಅಧಿಕಾರಿಗಳು ಹಲವು ಗಂಟೆಗಳ ಕಾಲ ಕಚೇರಿಯಲ್ಲೇ ಉಳಿದು ದಾಖಲೆಗಳ ಪರಿಶೀಲನೆ ನಡೆಸಿ, ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಖಾಸಗಿ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್.ಪಿ. ಟಿ. ಮಲ್ಲೇಶಿ, ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು, ಎಂದು ತಿಳಿಸಿದ್ದಾರೆ.

ಲೋಕಾಯುಕ್ತರ ಈ ದಾಳಿಯು ಇಂಡಿ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಇಂತಹ ಕ್ರಮಗಳು ಇನ್ನಷ್ಟು ಬಲ ನೀಡಲಿವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande