
ಬಾಗಲಕೋಟೆ, 02 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಅಶೋಕ್ ಕಾಲೋನಿಯ ಗಣಪತಿ ಗುಡಿ ಸಮೀಪದ ರಸ್ತೆಯಲ್ಲಿ ಮುಳ್ಳಿನ ಕಂಟೆಗಳು ಹಾಗೂ ಪೊದೆಗಳು ದಟ್ಟವಾಗಿ ಬೆಳೆದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದ ಸಮಸ್ಯೆಯನ್ನು ಕೆಆರ್ಎಸ್ ಪಕ್ಷದ ಮುಂದಾಳತ್ವದಲ್ಲಿ ತ್ವರಿತವಾಗಿ ಪರಿಹರಿಸಲಾಗಿದೆ.
ಸ್ಥಳೀಯ ನಿವಾಸಿಗಳು ಹಾಗೂ ಕೆಆರ್ಎಸ್ ಪಕ್ಷದ ಕಾರ್ಯಕರ್ತ ಮಲಿಕ್ ಬಾರಿಗಡ್ಡಿ ಅವರು ಈ ಸಮಸ್ಯೆಯನ್ನು ಪಕ್ಷದ ತಾಲೂಕು ಅಧ್ಯಕ್ಷ ನಿಜಾಮ್ ಜಮಾದಾರ್ ಅವರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಅನುಕೂಲವನ್ನು ಆದ್ಯತೆಯಾಗಿ ಪರಿಗಣಿಸಿದ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳ ಸೂಚನೆಯಂತೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿದ್ದ ಮುಳ್ಳಿನ ಕಂಟೆಗಳು ಮತ್ತು ಪೊದೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ರಸ್ತೆ ಸ್ವಚ್ಛಗೊಳಿಸಿದರು. ಇದರಿಂದ ಇದೀಗ ಸಾರ್ವಜನಿಕರು, ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಂಚರಿಸುವಂತಾಗಿದೆ.
ಈ ಕುರಿತು ಮಾತನಾಡಿದ ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ನಿಜಾಮ್ ಜಮಾದಾರ್, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ನಮ್ಮ ಪಕ್ಷದ ಬದ್ಧತೆಯಾಗಿದೆ. ವ್ಯವಸ್ಥೆಯ ಬದಲಾವಣೆ ಮತ್ತು ಜನಸೇವೆಯೇ ನಮ್ಮ ಮುಖ್ಯ ಗುರಿ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇವೆ, ಎಂದು ತಿಳಿಸಿದರು.
ಸಮಸ್ಯೆಯನ್ನು ಗಮನಕ್ಕೆ ತಂದ ಮಲಿಕ್ ಬಾರಿಗಡ್ಡಿ, ಸ್ಥಳೀಯ ನಿವಾಸಿಗಳು, ಪೌರ ಕಾರ್ಮಿಕರು ಹಾಗೂ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸ್ಥಳೀಯರು ಕೂಡ ರಸ್ತೆ ಸ್ವಚ್ಛಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಂಡ ಕೆಆರ್ಎಸ್ ಪಕ್ಷ ಹಾಗೂ ಸಂಬಂಧಿತ ಅಧಿಕಾರಿಗಳ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande