
ಗದಗ, 02 ಜುಲೈ (ಹಿ.ಸ.)
ಆ್ಯಂಕರ್;- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ಯಶಸ್ವಿಗೊಳಿಸುವ ಉದ್ದೇಶದಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವೀಪ್ ಜಾಗೃತಿ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವಂತೆ ತಾಲೂಕು ಪಂಚಾಯತ್ ನರಗುಂದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿಗಳ ಸ್ವೀಪ್ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕರಪತ್ರಗಳ ವಿತರಣೆ, ಬ್ಯಾನರ್ ಅಳವಡಿಕೆ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಯಲ್ಲಿ ಎಸ್.ಐ.ಆರ್. ಕಾರ್ಯಕ್ಕೆ ಹಿನ್ನಡೆಯಾಗದಂತೆ ಆಡಳಿತಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಾಗೂ ಬ್ಯಾನರ್ಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು, ಜಾಗೃತಿ ಕಾರ್ಯಕ್ರಮಗಳ ಜಿಪಿಎಸ್ ಛಾಯಾಚಿತ್ರಗಳನ್ನು ಜಿಲ್ಲಾ ಸ್ವೀಪ್ ಚಟುವಟಿಕೆಯ ವಾಟ್ಸ್ಆ್ಯಪ್ ಗ್ರುಪ್ ಗೆ ಕಡ್ಡಾಯವಾಗಿ ಅಪ್ಲೋಡ್ ಮಾಡುವಂತೆ ಸೂಚಿಸಿದರು.
ಸ್ವೀಪ್ ಕಾರ್ಯಕ್ರಮದ ಮುಖ್ಯ ಉದ್ದೇಶ ಅರ್ಹ ಪ್ರತಿಯೊಬ್ಬ ನಾಗರಿಕನನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾಲೂಕಿಗೆ ಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿನ ಆಡಳಿತ ಸೇವೆಗಳ ಎಲ್ಲ ಕಡತಗಳು, ದಾಖಲೆಗಳು ಹಾಗೂ ನೋಂದಣಿ ಪುಸ್ತಕಗಳನ್ನು ಸಂಪೂರ್ಣವಾಗಿ ನವೀಕರಿಸಿ ಸಿದ್ಧವಾಗಿಟ್ಟುಕೊಳ್ಳಬೇಕು. ಪರಿಶೀಲನೆ ವೇಳೆ ಯಾವುದೇ ಲೋಪದೋಷಗಳು ಕಂಡುಬಂದರೆ ಸಂಬಂಧಿಸಿದ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶ್ರೀಧರ್ ಚಿನಗುಂಡಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಸಂತೋಷಕುಮಾರ ಪಾಟೀಲ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಶ್ರೀಮತಿ ಕೃಷ್ಣಮ್ಮ ಹಾದಿಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಸಿಡಿಪಿಓ ನರಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳು, ಪುರಸಭೆ ನರಗುಂದದ ಅಧಿಕಾರಿಗಳು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP