

ಕೊಪ್ಪಳ, 02 ಜುಲೈ (ಹಿ.ಸ.):
ಆ್ಯಂಕರ್ : ಜಿಲ್ಲೆಯಲ್ಲಿ ಸಮಗ್ರ ಸಾವಯವ ಕೃಷಿ ವ್ಯವಸ್ಥೆಗಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ, ಅವುಗಳ ಜಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಕೃಷಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನೀರಾವರಿ ಪ್ರದೇಶದಲ್ಲಿ ಹಾಗೂ ವಿಶೇಷವಾಗಿ ಭತ್ತ ಬೆಳೆಯುವ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕಗೊಬ್ಬರಗಳ ಬಳಕೆಯಾಗುತ್ತಿದ್ದು, ಇದು ಜನರ ಆರೋಗ್ಯಕ್ಕೆ ಹಾನಿಕಾರವಾಗುವ ಜೊತೆಗೆ ಭೂಮಿಯ ಫಲವತ್ತತೆಯನ್ನು ಸಹ ಹಾಳು ಮಾಡುತ್ತದೆ. ಇದಕ್ಕಾಗಿ ಸಾವಯವ ಕೃಷಿಗೆ ಹೆಚ್ಚಿನ ಅದ್ಯತೆ ನೀಡಬೇಕಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ನಿರಂತರ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ರೇಷ್ಮೆ, ತೋಟಗಾರಿಕೆ, ಪಶುಪಾಲನೆ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಸಮಗ್ರ ಸಾವಯವ ಕೃಷಿಗೆ ಉತ್ತೇಜನ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಕೃಷಿ ಹೊಂಡ, ಚೆಕ್ ಡ್ಯಾಂಗಳ ನಿರ್ಮಾಣದಂತಹ ಯೋಜನೆಗಳ ಜಾರಿಗೂ ಒತ್ತು ನೀಡಬೇಕೆಂದರು.
ಕೃಷಿ, ತೋಟಗಾರಿಕಾ ಬೆಳೆಗಳಿಗೆ ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರವಾಗಿದೆ. ಆದರೆ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯದಿರುವ ಕಾರಣ ಬಾಹ್ಯವಾಗಿ ಗೊಬ್ಬರ ನೀಡಲಾಗುತ್ತದೆ. ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ.ಯ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ. ಇದನ್ನು ಕಡೆಮೆ ಮಾಡಲು ಕ್ರಮ ಕೈಗೊಳ್ಳಬೇಕು. ಭೂಮಿ ಮತ್ತು ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಸಾವಯವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಗೊಬ್ಬರ, ಎರೆಹುಳಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸಲು ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆ ಪಡೆಯಲು ನಿಗದಿತ ದಿನಾಂಕದೊಳಗೆ ನೋಂದಾಯಿಸಿಕೊಳ್ಳಕಿದೆ. ಇದಲ್ಲದೇ ರೈತರು ತಾವು ಬೆಳೆದ ಬೆಳೆಯನ್ನೇ ಸ್ವಯಂ ಬೆಳೆ ಸಮೀಕ್ಷೆ ಮೂಲಕ ದೃಢೀಕರಿಸಲು ಮತ್ತು ಸರಿಯಾದ ಬೆಳೆಯನ್ನು ನೋಂದಾಯಿಸಲು ಅವಕಾಶವಿದ್ದು, ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಪೋಸ್ಟರ್ ಬಿಡುಗಡೆ:* ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆಯಿಂದ ಸಿದ್ದಪಡಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಕುರಿತು ಜಾಗೃತಿ ಮೂಡಿಸುವ ಪೋಸ್ಟರಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತ ಕುಮಾರ್, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ.ಕೃಷ್ಣಮೂರ್ತಿ, ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ, ಉಪ ಕೃಷಿ ನಿರ್ದೇಶಕರಾದ ಎಲ್.ಸಿದ್ದೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಅಧಿಕಾರಿಗಳು, ಗೊಬ್ಬರ ಮಾರಾಟ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್