ಭಾರತ–ಜಪಾನ್ ಶೃಂಗಸಭೆ: ವ್ಯಾಪಾರ, ರಕ್ಷಣೆ ಮತ್ತು ತಂತ್ರಜ್ಞಾನ ಸಹಕಾರ ವಿಸ್ತರಣೆಗೆ ಒತ್ತು
ನವದೆಹಲಿ, 02 ಜುಲೈ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಸನಾಏ ತಕೈಚಿ ಅವರ ನಡುವೆ ಗುರುವಾರ ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಶೃಂಗಸಭೆ ನಡೆಯಿತು. ಈ ವೇಳೆ ಉಭಯ ನಾಯಕರು ವ್ಯಾಪಾರ, ಹೂಡಿಕೆ, ರಕ್ಷಣೆ, ತಂತ್ರಜ್ಞಾನ, ಹಿಂದೂ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ಸೇ
INDIA-JAPAN-PM


ನವದೆಹಲಿ, 02 ಜುಲೈ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಸನಾಏ ತಕೈಚಿ ಅವರ ನಡುವೆ ಗುರುವಾರ ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಶೃಂಗಸಭೆ ನಡೆಯಿತು. ಈ ವೇಳೆ ಉಭಯ ನಾಯಕರು ವ್ಯಾಪಾರ, ಹೂಡಿಕೆ, ರಕ್ಷಣೆ, ತಂತ್ರಜ್ಞಾನ, ಹಿಂದೂ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ಸೇರಿದಂತೆ ದ್ವಿಪಕ್ಷೀಯ ಹಾಗೂ ಜಾಗತಿಕ ಮಹತ್ವದ ಹಲವು ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.

ಭಾರತ–ಜಪಾನ್ ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆದ ಸಭೆಯಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸುವ ಕುರಿತು ಒಮ್ಮತ ವ್ಯಕ್ತವಾಯಿತು.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಜಪಾನ್ ಪ್ರಧಾನಿ ಸನಾಏ ತಕೈಚಿ ಅವರಿಗೆ ಅಧಿಕೃತ ಸ್ವಾಗತ ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಚಿವ ಸಂಪುಟದ ಸದಸ್ಯರು ಹಾಗೂ ಗಣ್ಯ ವ್ಯಕ್ತಿಗಳನ್ನು ತಕೈಚಿ ಅವರಿಗೆ ಪರಿಚಯಿಸಿದರು. ಮೂರು ಸೇನೆಗಳ ಪಥಸಂಚಲನ ದಳ ಮತ್ತು ಮಿಲಿಟರಿ ಬ್ಯಾಂಡ್ ವಿಶೇಷ ಪ್ರದರ್ಶನ ನೀಡಿತು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ವಿಶ್ವಾಸ, ಹಂಚಿಕೆಯ ಮೌಲ್ಯಗಳು ಹಾಗೂ ಕಾರ್ಯತಂತ್ರದ ಸಮನ್ವಯದ ಆಧಾರದ ಮೇಲೆ ರೂಪುಗೊಂಡಿರುವ ಭಾರತ–ಜಪಾನ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಸನಾಏ ತಕೈಚಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 16ನೇ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜುಲೈ 1ರಿಂದ 3ರವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದು ಅವರ ಮೊದಲ ಅಧಿಕೃತ ಭಾರತ ಭೇಟಿ. ಅಧಿಕೃತ ಸ್ವಾಗತದ ಬಳಿಕ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಕೇಂದ್ರ ಸಚಿವ ಸಂಪುಟದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬುಧವಾರ ನವದೆಹಲಿಗೆ ಆಗಮಿಸಿದ್ದ ತಕೈಚಿ ಅವರನ್ನು ಸ್ವಾಗತಿಸಿದ್ದ ಪ್ರಧಾನಿ ಮೋದಿ, ಭಾರತ–ಜಪಾನ್ ವಿಶೇಷ ಕಾರ್ಯತಂತ್ರದ ಹಾಗೂ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಚರ್ಚೆ ನಡೆಯಲಿದ್ದು, ಹಿಂದೂ–ಪೆಸಿಫಿಕ್ ಪ್ರದೇಶ ಸೇರಿದಂತೆ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಉಭಯ ರಾಷ್ಟ್ರಗಳು ಮುಂದೆಯೂ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande