ಭಾರತ–ಜಪಾನ್ ಆರ್ಥಿಕ ಭದ್ರತಾ ಮೈತ್ರಿಗೆ ಹೊಸ ಬಲ
100 ಟ್ರಿಲಿಯನ್ ಯೆನ್ ಹೂಡಿಕೆ ಗುರಿ; ಸೆಮಿಕಂಡಕ್ಟರ್, ಕ್ವಾಂಟಂ, ಜೈವ ಅನಿಲ ಘಟಕಗಳಿಗೆ ಒತ್ತು
INDIA-JAPAN-SUMMIT PM speech


ನವದೆಹಲಿ, 02 ಜುಲೈ (ಹಿ.ಸ.):

ಆ್ಯಂಕರ್:

ಭಾರತ ಮತ್ತು ಜಪಾನ್ ಆರ್ಥಿಕ ಭದ್ರತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಜಂಟಿ ಆರ್ಥಿಕ ಭದ್ರತಾ ಮಾರ್ಗಸೂಚಿಗೆ (ರೋಡ್‌ಮ್ಯಾಪ್) ಅನುಮೋದನೆ ನೀಡಿವೆ. ಈ ಒಪ್ಪಂದದಡಿ ಸೆಮಿಕಂಡಕ್ಟರ್, ಕ್ವಾಂಟಂ ತಂತ್ರಜ್ಞಾನ, ಸುಧಾರಿತ ವಸ್ತುಗಳು ಸೇರಿದಂತೆ ಹಲವು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಯನ್ನು (ಸಪ್ಲೈ ಚೈನ್) ಹೆಚ್ಚು ಸ್ಥಿರ ಹಾಗೂ ಬಲಿಷ್ಠಗೊಳಿಸಲು ಮುಂದಿನ ಹತ್ತು ವರ್ಷಗಳಲ್ಲಿ 100 ಟ್ರಿಲಿಯನ್ ಯೆನ್ ಹೂಡಿಕೆ ಗುರಿಯನ್ನು ನಿಗದಿಪಡಿಸಲಾಗಿದೆ.

ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ಗುರುವಾರ ನಡೆದ 16ನೇ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಸನಾಏ ತಕೈಚಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ನಾಲ್ಕು ಪರಸ್ಪರ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಭೂಗರ್ಭ ಖನಿಜಗಳ ಅನ್ವೇಷಣೆ, ಔಷಧ ಹಾಗೂ ವೈದ್ಯಕೀಯ ಉಪಕರಣಗಳು, ಬ್ಯಾಟರಿ ತಯಾರಿಕೆ, ಜೈವ ಅನಿಲ ಹಾಗೂ ಸಾವಯವ ಗೊಬ್ಬರ ಘಟಕಗಳ ಸ್ಥಾಪನೆಗೆ ಸಂಬಂಧಿಸಿದ ಸಹಕಾರ ಒಪ್ಪಂದಗಳು ಇದರಲ್ಲಿ ಸೇರಿವೆ. ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಜಂಟಿ ಘೋಷಣೆಯನ್ನೂ ಬಿಡುಗಡೆ ಮಾಡಲಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮೊದಲ ಜಂಟಿ ಅಭಿವೃದ್ಧಿ ಯೋಜನೆಗೂ ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ಭಾರತದಲ್ಲಿ 1,000 ಜೈವ ಅನಿಲ ಘಟಕಗಳು

ಶೃಂಗಸಭೆಯ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿ ಭಾರತದಲ್ಲಿ 1,000 ಜೈವ ಅನಿಲ ಹಾಗೂ ಸಾವಯವ ಗೊಬ್ಬರ ಘಟಕಗಳ ಸ್ಥಾಪನೆಗೆ ಜಪಾನ್ ಸಹಕಾರ ನೀಡಲಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಗೋವರ್ಧನ ಯೋಜನೆಗೆ ಮತ್ತಷ್ಟು ಬಲ ನೀಡಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ, ಆದಾಯ ಹಾಗೂ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಆರ್ಥಿಕ ಮತ್ತು ಇಂಧನ ಭದ್ರತೆಗೆ ಆದ್ಯತೆ

ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಆರ್ಥಿಕ ಹಾಗೂ ಇಂಧನ ಭದ್ರತೆ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸೆಮಿಕಂಡಕ್ಟರ್, ಕ್ವಾಂಟಂ ಮತ್ತು ಸುಧಾರಿತ ವಸ್ತುಗಳಂತಹ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಜಂಟಿ ರೋಡ್‌ಮ್ಯಾಪ್ ರೂಪಿಸಲಾಗಿದೆ ಎಂದು ತಿಳಿಸಿದರು.

ಬ್ಯಾಟರಿ, ಹಸಿರು ಹೈಡ್ರೋಜನ್ ಹಾಗೂ ಅಣುಶಕ್ತಿ ಕ್ಷೇತ್ರಗಳಲ್ಲಿಯೂ ಸಹಕಾರ ವಿಸ್ತರಿಸಲಿದ್ದು, ಜಾಗತಿಕ ಸ್ವಚ್ಛ ಇಂಧನ ಪರಿವರ್ತನೆಗೆ ಭಾರತ ಮತ್ತು ಜಪಾನ್ ಮಹತ್ವದ ಕೊಡುಗೆ ನೀಡಲಿವೆ ಎಂದು ಅವರು ಹೇಳಿದರು.

ಎಐ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ

ತಾಂತ್ರಿಕ ಸಹಕಾರವು ಭಾರತ–ಜಪಾನ್ ಸಂಬಂಧದ ಪ್ರಮುಖ ಆಧಾರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಜಪಾನ್‌ನ ತಾಂತ್ರಿಕ ಸಾಮರ್ಥ್ಯ ಹಾಗೂ ಭಾರತದ ಸಾಫ್ಟ್‌ವೇರ್ ಪರಿಣತಿ ಒಂದಾಗುವುದರಿಂದ ಜಾಗತಿಕ ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ರಕ್ಷಣಾ ಕ್ಷೇತ್ರದಲ್ಲೂ ಎರಡೂ ರಾಷ್ಟ್ರಗಳು ಮೊದಲ ಜಂಟಿ ಅಭಿವೃದ್ಧಿ ಯೋಜನೆ ಆರಂಭಿಸಲು ಒಪ್ಪಿಗೆ ಸೂಚಿಸಿದ್ದು, ಭದ್ರತಾ ಸಹಕಾರಕ್ಕೆ ಹೊಸ ಆಯಾಮ ದೊರೆಯಲಿದೆ ಎಂದರು.

ಜಪಾನ್ ಹೂಡಿಕೆ ದ್ವಿಗುಣ ಗುರಿ

ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಜಪಾನ್‌ನ ಹೂಡಿಕೆಯನ್ನು 100 ಟ್ರಿಲಿಯನ್ ಯೆನ್‌ಗೆ ಹೆಚ್ಚಿಸುವುದು ಹಾಗೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.

ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಜಪಾನ್ ಕಂಪನಿಗಳ ನಡುವೆ ಸುಮಾರು 120 ಹೊಸ ವಾಣಿಜ್ಯ ಒಪ್ಪಂದಗಳು ನಡೆದಿದ್ದು, ಇದರಿಂದ ಭಾರತಕ್ಕೆ 10 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಜಪಾನಿ ಹೂಡಿಕೆ ಹರಿದುಬರಲಿದೆ ಎಂದರು.

'ಅಣ್ಣ–ತಂಗಿ' ಬಾಂಧವ್ಯ ಗಮನ ಸೆಳೆದ ಕ್ಷಣ

ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಜಪಾನ್ ಪ್ರಧಾನಿ ಸನಾಏ ತಕೈಚಿ ಅವರನ್ನು ನನ್ನ ಚಿಕ್ಕ ತಂಗಿ ಎಂದು ಸಂಬೋಧಿಸಿದಾಗ ಸಭಾಂಗಣದಲ್ಲಿ ಆತ್ಮೀಯ ವಾತಾವರಣ ನಿರ್ಮಾಣವಾಯಿತು. ಪ್ರತಿಯಾಗಿ ತಕೈಚಿ ಅವರು ಮೋದಿ ಅವರನ್ನು ನನ್ನ ದೊಡ್ಡ ಅಣ್ಣ ಎಂದು ಕರೆದು, ಉಭಯ ದೇಶಗಳ ಸಂಬಂಧವನ್ನು ಇದೇ ರೀತಿಯ ವಿಶ್ವಾಸ ಮತ್ತು ಆತ್ಮೀಯತೆಯೊಂದಿಗೆ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಇಂಡೋ–ಪೆಸಿಫಿಕ್ ಮತ್ತು ಸಮುದ್ರ ಭದ್ರತೆಗೆ ಒತ್ತು

ಸ್ವತಂತ್ರ, ಮುಕ್ತ ಹಾಗೂ ನಿಯಮಾಧಾರಿತ ಇಂಡೋ–ಪೆಸಿಫಿಕ್ ಪ್ರದೇಶದ ಪರವಾಗಿ ಎರಡೂ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು. ಸಮುದ್ರ ಭದ್ರತೆ, ನೌಕಾಪಡೆಗಳ ಜಂಟಿ ಸಮರಾಭ್ಯಾಸ, ಹಡಗುಗಳ ನಿರ್ವಹಣೆ ಮತ್ತು 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ರಕ್ಷಣಾ ಉಪಕರಣಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಒಪ್ಪಿಗೆ ನೀಡಲಾಯಿತು.

ತಕೈಚಿ: ಭಾರತ–ಜಪಾನ್ ಸಹಕಾರ ಇನ್ನಷ್ಟು ಗಟ್ಟಿಯಾಗಲಿದೆ

ಜಪಾನ್ ಪ್ರಧಾನಿ ಸನಾಏ ತಕೈಚಿ ಮಾತನಾಡಿ, ಅಂತರರಾಷ್ಟ್ರೀಯ ಸವಾಲುಗಳ ನಡುವೆಯೂ ಭಾರತ ಮತ್ತು ಜಪಾನ್ ಪರಸ್ಪರ ಪೂರಕ ರಾಷ್ಟ್ರಗಳಾಗಿದ್ದು, ಕಾರ್ಯತಂತ್ರ, ಆರ್ಥಿಕ ಭದ್ರತೆ, ಇಂಧನ ಭದ್ರತೆ ಹಾಗೂ ಹೂಡಿಕೆ–ಆವಿಷ್ಕಾರ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.

ಮುಂದಿನ ವರ್ಷ ಭಾರತ–ಜಪಾನ್ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷದ ಸಂಭ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಉಭಯ ರಾಷ್ಟ್ರಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande