
ಬಾಗಲಕೋಟೆ, 02 ಜುಲೈ (ಹಿ.ಸ.)
ಆ್ಯಂಕರ್ : ದೇಶದ ಗಡಿಭಾಗದಲ್ಲಿ 22 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಮೇಶ ಅಯ್ಯಪ್ಪ ನೀರಲಗಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಡರಬೂದಿಹಾಳ ಗ್ರಾಮದಲ್ಲಿ ಗ್ರಾಮಸ್ಥರು ಭವ್ಯ ಹಾಗೂ ಅದ್ಧೂರಿ ಸ್ವಾಗತ ಕೋರಿದರು.
ಯೋಧನ ಆಗಮನದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮಿಂದೇಳಿದ್ದು, ದೇಶಸೇವೆಗೆ ಸಲ್ಲಿಸಿದ ಅವರ ತ್ಯಾಗ ಮತ್ತು ಸಮರ್ಪಣೆಯನ್ನು ಸ್ಮರಿಸಿ ಗ್ರಾಮಸ್ಥರು ಗೌರವ ಸಮರ್ಪಿಸಿದರು.
ಭಾರತೀಯ ಸೈನ್ಯದ ಮದ್ರಾಸ್ ರೆಜಿಮೆಂಟ್ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ರಮೇಶ ನೀರಲಗಿ ಅವರು ಗುರುವಾರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಬಾದಾಮಿ ರೈಲು ನಿಲ್ದಾಣದಲ್ಲಿ ನೂರಾರು ಗ್ರಾಮಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಹೂಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಡೊಳ್ಳು-ತಾಶಾ, ಬ್ಯಾಂಡ್ ವಾದ್ಯಗಳು ಹಾಗೂ ಜಯಘೋಷಗಳ ನಡುವೆ ಯೋಧನಿಗೆ ಗೌರವ ಸಲ್ಲಿಸಲಾಯಿತು.
ಬಳಿಕ ಬಾದಾಮಿ ರೈಲು ನಿಲ್ದಾಣದಿಂದ ಚಿಕ್ಕಮುಚ್ಚಳಗುಡ್ಡ ಮಾರ್ಗವಾಗಿ ಬೇಡರಬೂದಿಹಾಳ ಗ್ರಾಮವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಪುಷ್ಪವೃಷ್ಟಿ ಸುರಿಸಿ, ಭಾರತ ಮಾತೆಗೆ ಜಯ ಹಾಗೂ ವಂದೇ ಮಾತರಂ ಘೋಷಣೆಗಳನ್ನು ಕೂಗಿ ದೇಶಭಕ್ತಿಯ ಸಂಭ್ರಮವನ್ನು ವ್ಯಕ್ತಪಡಿಸಿದರು. ಗ್ರಾಮದಲ್ಲಿ ಎಲ್ಲೆಡೆ ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದು, ಯೋಧನಿಗೆ ಜನರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ನಿವೃತ್ತ ಯೋಧ ರಮೇಶ ನೀರಲಗಿ ಅವರು ದೇಶಸೇವೆಯ ಜೊತೆಗೆ ಸಮಾಜಸೇವೆಯಲ್ಲಿಯೂ ಸಕ್ರಿಯರಾಗಿದ್ದಾರೆ. ತಮ್ಮ ಸ್ವಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿ ಶಿಕ್ಷಣಕ್ಕೆ ಉತ್ತೇಜನ ನೀಡಿರುವ ಅವರು, ಗ್ರಾಮಾಭಿವೃದ್ಧಿ ಮತ್ತು ಯುವಜನರ ಸಬಲೀಕರಣಕ್ಕೂ ಸದಾ ಬೆಂಬಲವಾಗಿ ನಿಂತಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಬೆಳೆದು ದೇಶಸೇವೆ ತಾಯಿಸೇವೆ ಎಂಬ ಆದರ್ಶದೊಂದಿಗೆ ರಾಷ್ಟ್ರಸೇವೆ ಸಲ್ಲಿಸಿರುವ ಅವರು ಯುವಜನತೆಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧರ ತ್ಯಾಗ ಮತ್ತು ಸೇವೆ ಅಮೂಲ್ಯವಾಗಿದೆ. ರಮೇಶ ನೀರಲಗಿ ಅವರಂತಹ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಅವರ ಜೀವನ ಯುವಜನರಿಗೆ ದೇಶಭಕ್ತಿ ಮತ್ತು ಸೇವಾ ಮನೋಭಾವಕ್ಕೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮದ ಹಿರಿಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಯುವಕರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಧನಿಗೆ ಸನ್ಮಾನ ಸಲ್ಲಿಸಿದರು. ಈ ಅದ್ಧೂರಿ ಸ್ವಾಗತ ಕಾರ್ಯಕ್ರಮ ಬೇಡರಬೂದಿಹಾಳ ಗ್ರಾಮದಲ್ಲಿ ದೇಶಪ್ರೇಮದ ಸಂದೇಶ ಸಾರಿದ ಅಪರೂಪದ ಕ್ಷಣವಾಗಿ ಗಮನಸೆಳೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande