
ಗದಗ, 02 ಜುಲೈ (ಹಿ.ಸ.)
ಆ್ಯಂಕರ್:- ತೋಟಗಾರಿಕೆ ಬೆಳೆಗಾರರ ಆದಾಯ ಹೆಚ್ಚಿಸುವುದು, ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಉತ್ತೇಜನ ನೀಡುವುದು ಹಾಗೂ ತೋಟಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಜುಲೈ 15ರೊಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತೋಟಗಾರಿಕೆ ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ಹಾವಳಿಯಿಂದ ಉಂಟಾಗುವ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ವಲಯ ಯೋಜನೆಯಡಿ ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ವಿವಿಧ ಬೆಳೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ರೋಗ ಮತ್ತು ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ರೈತರಿಗೆ ಸಹಾಯಧನ ನೀಡಲಾಗುತ್ತದೆ. ಇದರಿಂದ ಬೆಳೆಗಳ ಉತ್ಪಾದನೆ ಹೆಚ್ಚುವುದರ ಜೊತೆಗೆ ರೈತರ ಉತ್ಪಾದನಾ ವೆಚ್ಚವೂ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಅದೇ ರೀತಿ ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಜೇನು ಸಾಕಾಣಿಕೆಗೆ ಉತ್ತೇಜನ ನೀಡುವ ಸಲುವಾಗಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಕೃಷಿಯ ಜೊತೆಗೆ ಪೂರಕ ಉದ್ಯಮವಾಗಿ ಜೇನು ಸಾಕಾಣಿಕೆ ಕೈಗೊಳ್ಳಲು ಬಯಸುವ ರೈತರಿಗೆ ಈ ಯೋಜನೆ ನೆರವಾಗಲಿದ್ದು, ಹೆಚ್ಚುವರಿ ಆದಾಯ ಗಳಿಸಲು ಅವಕಾಶ ಕಲ್ಪಿಸಲಿದೆ.
ತಾಳೆ ಬೆಳೆ ಬೆಳೆಯುವ ರೈತರಿಗೂ ವಿಶೇಷ ಪ್ರೋತ್ಸಾಹ ನೀಡಲಾಗಿದೆ. ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಹೊಸದಾಗಿ ತಾಳೆ ಸಸಿ ನೆಡುವ ರೈತರಿಗೆ ಸಸಿಗಳ ಖರೀದಿಗೆ ಸಹಾಯಧನ ನೀಡುವುದರ ಜೊತೆಗೆ ನಾಲ್ಕು ವರ್ಷಗಳವರೆಗೆ ನಿರ್ವಹಣಾ ವೆಚ್ಚ, ಅಂತರ ಬೇಸಾಯಕ್ಕೆ ನೆರವು ಹಾಗೂ ತಾಳೆ ಬೆಳೆಗೆ ಅಗತ್ಯವಿರುವ ಯಂತ್ರೋಪಕರಣಗಳ ಖರೀದಿಗೂ ಸಹಾಯಧನ ದೊರೆಯಲಿದೆ. ಇದರ ಜೊತೆಗೆ ಎರೆಹುಳು ಗೊಬ್ಬರ ಘಟಕ ಸ್ಥಾಪನೆ ಹಾಗೂ ಎತ್ತರದ ತಾಳೆ ಮರಗಳಿಂದ ಹಣ್ಣುಗಳನ್ನು ಸುರಕ್ಷಿತವಾಗಿ ಕಟಾವು ಮಾಡಲು ಬಳಸುವ ಉಪಕರಣಗಳಿಗೂ ಸರ್ಕಾರದ ಮಾರ್ಗಸೂಚಿಯಂತೆ ಸಹಾಯಧನ ನೀಡಲಾಗುತ್ತದೆ.
ನೀರಿನ ಅಭಾವದ ನಡುವೆಯೂ ತೋಟಗಾರಿಕೆ ಬೆಳೆಗಳನ್ನು ಸಮರ್ಪಕವಾಗಿ ಬೆಳೆಯಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮಹತ್ವದ ಅವಕಾಶ ಒದಗಿಸಿದೆ. ಈ ಯೋಜನೆಯಡಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ 5 ಎಕರೆ ಪ್ರದೇಶದವರೆಗೆ ಶೇ.90ರಷ್ಟು ಸಹಾಯಧನದೊಂದಿಗೆ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಬಹುದಾಗಿದೆ. ಇದರ ನಂತರದ 7.20 ಎಕರೆ ಪ್ರದೇಶಕ್ಕೆ ಶೇ.45ರಷ್ಟು ಸಹಾಯಧನ ಲಭ್ಯವಿರುತ್ತದೆ. ತರಕಾರಿ ಬೆಳೆಗಳಿಗೆ ಗರಿಷ್ಠ 5 ಎಕರೆವರೆಗೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತದೆ. ನೀರಿನ ಮಿತವ್ಯಯದ ಜೊತೆಗೆ ಹೆಚ್ಚಿನ ಉತ್ಪಾದನೆ ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಇನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ಲಾಸ್ಟಿಕ್ ಕ್ರೇಟ್ಸ್, ಫಾರ್ಮ್ಗೇಟ್ ವ್ಯವಸ್ಥೆ, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಘಟಕ, ತೆಂಗಿನಕಾಯಿ ಶೇಖರಣಾ ಘಟಕ, ಲಘು ಪೋಷಕಾಂಶಗಳ ಮಿಶ್ರಣ ಹಾಗೂ ಸೋಲಾರ್ ಪಂಪ್ಸೆಟ್ಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ. ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಿ ಕೃಷಿ ಉತ್ಪನ್ನಗಳ ಗುಣಮಟ್ಟ ಕಾಪಾಡಲು ಈ ಯೋಜನೆಗಳು ನೆರವಾಗಲಿವೆ.
ಇದರೊಂದಿಗೆ ಕೃಷಿ ಯಾಂತ್ರೀಕರಣ ಅಭಿಯಾನ ಯೋಜನೆಯಡಿ ವಿವಿಧ ಕೃಷಿ ಹಾಗೂ ತೋಟಗಾರಿಕೆ ಯಂತ್ರೋಪಕರಣಗಳ ಖರೀದಿಗೂ ಸಹಾಯಧನ ನೀಡಲಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸುವುದರಿಂದ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಉತ್ಪಾದನಾ ವೆಚ್ಚ ತಗ್ಗಿಸಿ, ಕೃಷಿ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ತೋಟಗಾರಿಕೆ ಇಲಾಖೆ ಸ್ಪಷ್ಟಪಡಿಸಿರುವಂತೆ, ಸಹಾಯಧನವು ಸರ್ಕಾರದಿಂದ ಲಭ್ಯವಾಗುವ ಅನುದಾನ ಹಾಗೂ ಜಾರಿಯಲ್ಲಿರುವ ಮಾರ್ಗಸೂಚಿಗಳ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಆದ್ದರಿಂದ ರೈತರು ಯೋಜನೆಗಳ ಅರ್ಹತಾ ಮಾನದಂಡಗಳನ್ನು ತಿಳಿದುಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಆಸಕ್ತ ರೈತರು ಜುಲೈ 15ರೊಳಗೆ ಗದಗ ತೋಟಗಾರಿಕೆ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆ ಮನವಿ ಮಾಡಿದೆ. ಗದಗ ಹೋಬಳಿಗೆ 7026478109, ಬೆಟಗೇರಿ-1 ಹೋಬಳಿಗೆ 8867887191, ಬೆಟಗೇರಿ-2 ಹೋಬಳಿಗೆ 8884145201, ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು 9743595224 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು 9844317262 ಸಂಖ್ಯೆಯಲ್ಲಿ ಸಂಪರ್ಕಿಸಿ ಯೋಜನೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಸರ್ಕಾರದ ಈ ವಿವಿಧ ಸಹಾಯಧನ ಯೋಜನೆಗಳ ಸದುಪಯೋಗ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ನೀರಿನ ಸಮರ್ಪಕ ಬಳಕೆ, ಯಾಂತ್ರೀಕರಣ, ಜೇನು ಸಾಕಾಣಿಕೆ, ಶೇಖರಣಾ ವ್ಯವಸ್ಥೆ ಹಾಗೂ ಮೌಲ್ಯವರ್ಧನೆಗೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ರೈತರ ಆದಾಯ ಹೆಚ್ಚುವುದರ ಜೊತೆಗೆ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP