
ಬಾಗಲಕೋಟೆ, 02 ಜುಲೈ (ಹಿ.ಸ.)
ಆ್ಯಂಕರ್ : ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳ್ಳತನವಾಗಿದ್ದ ಮೊಬೈಲ್ಗಳನ್ನು ಪತ್ತೆಹಚ್ಚುವಲ್ಲಿ ಬಾಗಲಕೋಟೆ ಉಪವಿಭಾಗದ ಪೊಲೀಸರು ಮತ್ತೊಮ್ಮೆ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಸಿಇಐಆರ್ ವ್ಯವಸ್ಥೆಯ ಪರಿಣಾಮಕಾರಿ ಬಳಕೆಯ ಮೂಲಕ ಒಟ್ಟು 45 ಮೊಬೈಲ್ಗಳನ್ನು ಪತ್ತೆಹಚ್ಚಿ, ಸುಮಾರು ₹11 ಲಕ್ಷ ಮೌಲ್ಯದ ಮೊಬೈಲ್ಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಸಾರ್ವಜನಿಕರಿಂದ ಮೊಬೈಲ್ ಕಳೆದುಹೋದ ಹಾಗೂ ಕಳ್ಳತನವಾದ ಕುರಿತು ದಾಖಲಾದ ದೂರುಗಳನ್ನು ಆಧರಿಸಿ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ಗಳ ಐಎಂಇಐ ಸಂಖ್ಯೆಯನ್ನು ಟ್ರ್ಯಾಕ್ ಮಾಡಿ ತಾಂತ್ರಿಕ ತನಿಖೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ವಿವಿಧ ಸ್ಥಳಗಳಲ್ಲಿ ಬಳಕೆಯಲ್ಲಿದ್ದ ಮೊಬೈಲ್ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಯಿತು.
ನಂತರ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಮೊಬೈಲ್ಗಳ ನೈಜ ಮಾಲೀಕರನ್ನು ಗುರುತಿಸಿ, ಅವರ ಸಮ್ಮುಖದಲ್ಲೇ ಮೊಬೈಲ್ಗಳನ್ನು ಹಸ್ತಾಂತರಿಸಲಾಯಿತು. ಕಳೆದುಹೋದ ಮೊಬೈಲ್ಗಳನ್ನು ಮರಳಿ ಪಡೆದ ಸಾರ್ವಜನಿಕರು ಬಾಗಲಕೋಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, ಮೊಬೈಲ್ ಕಳೆದುಹೋದ ಕೂಡಲೇ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಅಥವಾ ಸಿಇಐಆರ್ ಪೋರ್ಟಲ್ನಲ್ಲಿ ಮಾಹಿತಿ ದಾಖಲಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ತಕ್ಷಣ ದೂರು ದಾಖಲಿಸಿದರೆ ಮೊಬೈಲ್ಗಳನ್ನು ಟ್ರ್ಯಾಕ್ ಮಾಡಿ ಪತ್ತೆಹಚ್ಚುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಆಧುನಿಕ ತಂತ್ರಜ್ಞಾನದ ನೆರವಿನಿಂದ ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಸುರಕ್ಷಿತವಾಗಿ ಮರಳಿ ಒದಗಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಇಐಆರ್ ವ್ಯವಸ್ಥೆ ಈ ನಿಟ್ಟಿನಲ್ಲಿ ಪರಿಣಾಮಕಾರಿ ಸಾಧನವಾಗಿದೆ ಎಂದು ಅಧಿಕಾರಿಗಳು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande