
ಬಾಗಲಕೋಟೆ, 02 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದ ವಿವಿಧ ಭಾಗಗಳಲ್ಲಿ ಮಳೆಗಾಗಿ ವಿಶೇಷ ಸಂಪ್ರದಾಯದ ಗುರ್ಜಿ ಪೂಜೆ ನಡೆಸುವ ಮೂಲಕ ಜನತೆ ವರುಣನ ಕೃಪೆಗೆ ಮೊರೆಯಿಟ್ಟರು. ಜಿಲ್ಲೆಯಾದ್ಯಂತ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಯುವಕರು ಸೇರಿ ಪಾರಂಪರಿಕ ಆಚರಣೆಯ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗುರುವಾರ ಬೆಳಿಗ್ಗೆಯಿಂದಲೇ ಹುನಗುಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗುರ್ಜಿಯನ್ನು ಹೊತ್ತ ಯುವಕನೊಂದಿಗೆ ಮಹಿಳೆಯರು, ಮಕ್ಕಳು ಹಾಗೂ ಸ್ಥಳೀಯರು ಮನೆ ಮನೆಗೆ ತೆರಳಿ ಪೂಜೆ ನೆರವೇರಿಸಿದರು. ಈ ವೇಳೆ ಮಹಿಳೆಯರು,
ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ತೇಲಾಡಿ ಬಂದೆ, ಬಾ ಬಾ ಮಳೆಯೇ, ಸುರಿಯೆ ಮಳೆಯೇ...
ಎಂಬ ಜನಪದ ಹಾಡನ್ನು ಹಾಡುತ್ತಾ ವರುಣ ದೇವರನ್ನು ಪ್ರಾರ್ಥಿಸಿದರು. ಮನೆಗಳ ಮುಂದೆ ಗುರ್ಜಿಗೆ ಪೂಜೆ ಸಲ್ಲಿಸಿದ ಭಕ್ತರು ಅದರ ಮೇಲೆ ನೀರು ಎರಚಿ ಶೀಘ್ರ ಮಳೆ ಸುರಿಯಲೆಂದು ಬೇಡಿಕೊಂಡರು.
ಕಳೆದ ಹಲವು ವಾರಗಳಿಂದ ಸಮರ್ಪಕ ಮಳೆಯಾಗದ ಕಾರಣ ಹೊಲಗಳಲ್ಲಿ ಬಿತ್ತನೆಯಾದ ಬೆಳೆಗಳು ಒಣಗಲಾರಂಭಿಸಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆಯ ಭೀತಿಯೂ ಎದುರಾಗಿದೆ. ಹೀಗಾಗಿ ವೈಜ್ಞಾನಿಕ ಕ್ರಮಗಳ ಜೊತೆಗೆ ಜನರು ತಮ್ಮ ಪಾರಂಪರಿಕ ನಂಬಿಕೆಗಳಂತೆ ಸಂಪ್ರದಾಯದ ಆಚರಣೆಗಳನ್ನು ಕೈಗೊಂಡು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಗುರ್ಜಿ ಪೂಜೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಗಾಗಿ ನಡೆಸುವ ವಿಶಿಷ್ಟ ಜನಪದ ಸಂಪ್ರದಾಯವಾಗಿದೆ. ಈ ಆಚರಣೆಯಲ್ಲಿ ಗ್ರಾಮದ ಬೀದಿಗಳಲ್ಲಿ ಗುರ್ಜಿಯನ್ನು ಹೊತ್ತು ಸಂಚರಿಸಿ ಜನರಿಂದ ಪೂಜೆ ಸಲ್ಲಿಸಿಸಿಕೊಂಡು, ನೀರು ಎರಚುವ ಮೂಲಕ ವರುಣ ದೇವರ ಕೃಪೆ ಕೋರುವ ಪದ್ಧತಿ ಇಂದಿಗೂ ಜೀವಂತವಾಗಿದೆ.
ಈ ವಿಶೇಷ ಪೂಜೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ಬಳಿಕವೂ ಜಿಲ್ಲೆಯಲ್ಲಿ ಮಳೆಯ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಶೀಘ್ರವೇ ಉತ್ತಮ ಮಳೆಯಾಗಿ ಬರದ ಸಂಕಷ್ಟ ದೂರವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande