

ಕೊಪ್ಪಳ, 02 ಜುಲೈ (ಹಿ.ಸ.)
ಆ್ಯಂಕರ್ :
ಕನ್ನಡ ನಾಡು ಭೂದಾಹ, ಜಲದಾಹ ಹಾಗೂ ಅರಣ್ಯದಾಹದ ಮಾಫಿಯಾಗಳ ಕಬಳಿಕೆಗೆ ಸಿಲುಕಿ ನಲುಗುತ್ತಿದೆ ಎಂದು ಕೆ.ಆರ್.ಎಸ್. ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ ವೀರೇಶ ಆರೋಪಿಸಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ನಗರಸಭೆ ಎದುರು 'ಬಲ್ಡೋಟ ತೊಲಗಿಸಿ–ಕೊಪ್ಪಳ ಉಳಿಸಿ', 'ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ' ಹಾಗೂ 'ತುಂಗಭದ್ರಾ ನದಿಯನ್ನು ವಿಷಗೊಳಿಸುತ್ತಿರುವ ಕಾರ್ಖಾನೆಗಳನ್ನು ಬಂದ್ ಮಾಡಿ' ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿಯ 245ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬಿಡದಿ ಟೌನ್‌ಶಿಪ್ ಯೋಜನೆಗೆ ಮುಂದಾಗಿದ್ದಾರೆ. ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಕಾರ್ಪೊರೇಟ್ ಪರ ಧೋರಣೆಯಿಂದ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆಶಾ ವೀರೇಶ ಟೀಕಿಸಿದರು.
ಈ ಯೋಜನೆ ಯಶಸ್ವಿಯಾದರೆ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳು ದೊಡ್ಡ ಮಟ್ಟದಲ್ಲಿ ಕಬಳಿಕೆಗೆ ಒಳಗಾಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು. ಇಂತಹ ಸಂದರ್ಭದಲ್ಲೂ ಜನರ ಪರವಾಗಿ ಧ್ವನಿಯಾಗಬೇಕಾದ ವಿರೋಧ ಪಕ್ಷಗಳು ಮೌನ ವಹಿಸಿರುವುದು ಬೇಸರದ ಸಂಗತಿ. ಆಡಳಿತ ಮತ್ತು ಪ್ರತಿ ಪಕ್ಷಗಳು ಕಾರ್ಪೊರೇಟ್ ಹಿತಾಸಕ್ತಿಗೆ ಮಣಿದು ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಕೊಪ್ಪಳದ ಸುಮಾರು ಎರಡು ಲಕ್ಷ ಜನರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷಗಳು ಮೌನವಾಗಿರುವುದರಿಂದ ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ ಎಂಬ ಅನುಮಾನ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಶಕ್ತಿಗಳು ಒಂದಾಗಿ ಚುನಾವಣೆಯನ್ನು ಎದುರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಕೆ.ಆರ್.ಎಸ್. ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಎಲ್. ಜೀವನ್ ಮಾತನಾಡಿ, ಜನರ ಹಕ್ಕುಗಳಿಗಾಗಿ ಪಕ್ಷ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದರು. ಧರಣಿಯ 250ನೇ ದಿನದ ಕಾರ್ಯಕ್ರಮಕ್ಕೆ ಪಕ್ಷದ ರಾಜ್ಯ ಗೌರವಾಧ್ಯಕ್ಷ ರವಿಕೃಷ್ಣ ರೆಡ್ಡಿ ಆಗಮಿಸಿ ಬೆಂಬಲ ಸೂಚಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಧರಣಿಯಲ್ಲಿ ವಿಜಯನಗರ ಜಿಲ್ಲೆಯ ಕೆ.ಆರ್.ಎಸ್. ಪಕ್ಷದ ಮುಖಂಡ ಪಿ.ಯು. ಗಣೇಶ್, ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ರಾಜಶೇಖರ್ ಏಳುಭಾವಿ, ವೆಂಕಣ್ಣಾಚಾರ ಕಟ್ಟಿ, ವೀರೇಶ ಉಡಮಕಲ್, ಬಸವರಾಜ ಕರಡಿ, ತಾಲೂಕು ಅಧ್ಯಕ್ಷ ವೀರೇಶ ಇಂದರಗಿ ಗೊಂಡಬಾಳ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಹಾಗೂ ಪರಿಸರ ಹೋರಾಟಗಾರರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್