
ನವದೆಹಲಿ, 02 ಜುಲೈ (ಹಿ.ಸ.):
ಆ್ಯಂಕರ್:
ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆಯಾಗಿದ್ದು, ಹೆಲಿಕಾಪ್ಟರ್ ಕಾರ್ಯಾಚರಣೆಗಾಗಿ ದೇಶದ ಮೊದಲ ಖಾಸಗಿ ಪಾಯಿಂಟ್-ಇನ್-ಸ್ಪೇಸ್ ಇನ್‌ಸ್ಟ್ರುಮೆಂಟ್ ಅಪ್ರೋಚ್ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ದೂರದ, ದುರ್ಗಮ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಹಾರಾಟ ಮತ್ತಷ್ಟು ಸುರಕ್ಷಿತವಾಗಲಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿರುವ ಮಾಹಿತಿಯಂತೆ, ಉಂಡವಲ್ಲಿ ಹೆಲಿಪೋರ್ಟ್‌ನಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಈ ವ್ಯವಸ್ಥೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.
ಈ ಪ್ರಕ್ರಿಯೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿವೃದ್ಧಿಪಡಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅನುಮೋದಿಸಿದೆ. ಇದು ಡಿಜಿಸಿಎ ನಿಯಮಗಳು ಹಾಗೂ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.
ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾತನಾಡಿ, ದೇಶದ ಮೊದಲ ಪಿನ್‌ಎಸ್ ಇನ್‌ಸ್ಟ್ರುಮೆಂಟ್ ಅಪ್ರೋಚ್ ವ್ಯವಸ್ಥೆಯ ಜಾರಿಗೆ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇದರಿಂದ ಹಾರಾಟದ ಸುರಕ್ಷತೆ, ಕಾರ್ಯಾಚರಣೆಯ ದಕ್ಷತೆ ಹಾಗೂ ಎಲ್ಲಾ ರೀತಿಯ ಹವಾಮಾನದಲ್ಲಿಯೂ ಸೇವೆ ಒದಗಿಸುವ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಲಿದೆ ಎಂದು ಹೇಳಿದರು.
ಕಳೆದ ವಾರವೇ ದೇಶೀಯ ಗಗನ್ ಉಪಗ್ರಹ ಆಧಾರಿತ ನಿಖರ ಅಪ್ರೋಚ್ ವ್ಯವಸ್ಥೆಯನ್ನು ವಾಣಿಜ್ಯ ವಿಮಾನದ ಮೂಲಕ ಯಶಸ್ವಿಯಾಗಿ ಪ್ರದರ್ಶಿಸಲಾಗಿತ್ತು. ಈಗ ಪಿನ್‌ಎಸ್ ವ್ಯವಸ್ಥೆಯ ಅನುಮೋದನೆ ಮತ್ತೊಂದು ಮಹತ್ವದ ಸಾಧನೆಯಾಗಿದೆ. ಇದು ಕಾರ್ಯಕ್ಷಮತೆ ಆಧಾರಿತ ನ್ಯಾವಿಗೇಶನ್ ಮೂಲಕ ವಿಮಾನಯಾನ ಮೂಲಸೌಕರ್ಯವನ್ನು ಆಧುನೀಕರಿಸುವ ಹಾಗೂ ಸ್ವದೇಶಿ ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವ ಸರ್ಕಾರದ ದೃಷ್ಟಿಕೋನಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ತಿಳಿಸಿದರು.
ದೇಶಾದ್ಯಂತ ಹೆಲಿಕಾಪ್ಟರ್ ಕಾರ್ಯಾಚರಣೆಯನ್ನು ಹೆಚ್ಚು ವಿಶ್ವಾಸಾರ್ಹ ಹಾಗೂ ಸುಲಭಗೊಳಿಸಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಜಾಗತಿಕ ಗುಣಮಟ್ಟಕ್ಕೆ ತಕ್ಕ ತಂತ್ರಜ್ಞಾನ ಆಧಾರಿತ ಹೆಲಿಕಾಪ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.
ಈ ವರ್ಷ ನಡೆದ ಮೊದಲ ಹಂತದ ಚಾರ್‌ಧಾಮ್ ಹೆಲಿಕಾಪ್ಟರ್ ಸೇವೆ ಯಾವುದೇ ಅಡಚಣೆ ಇಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನೂ ಸಚಿವರು ಉಲ್ಲೇಖಿಸಿದರು.
ಸಚಿವಾಲಯದ ಪ್ರಕಾರ, ಈ ಅನುಮೋದನೆಯಿಂದ ದೇಶದಾದ್ಯಂತ ಇದೇ ಮಾದರಿಯ ಪಿನ್‌ಎಸ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ದಾರಿ ತೆರೆಯಲಿದೆ. ಇದರಿಂದ ತುರ್ತು ವೈದ್ಯಕೀಯ ಸೇವೆಗಳು, ವಿಪತ್ತು ಪರಿಹಾರ ಕಾರ್ಯಾಚರಣೆಗಳು, ಪ್ರವಾಸೋದ್ಯಮ, ಸಮುದ್ರ ತೀರದ ಕಾರ್ಯಾಚರಣೆಗಳು, ತೀರ್ಥಯಾತ್ರೆ ಸೇವೆಗಳು, ಕಾರ್ಪೊರೇಟ್ ವಿಮಾನಯಾನ ಹಾಗೂ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಗೆ ಮಹತ್ವದ ಉತ್ತೇಜನ ದೊರೆಯಲಿದೆ. ಜೊತೆಗೆ, ಪ್ರತಿಕೂಲ ಹವಾಮಾನದಲ್ಲಿಯೂ ಸುರಕ್ಷಿತ ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗುವುದರೊಂದಿಗೆ ಸೇವೆಯ ವಿಶ್ವಾಸಾರ್ಹತೆ ಹೆಚ್ಚಿ, ಹವಾಮಾನದಿಂದ ಉಂಟಾಗುವ ವ್ಯತ್ಯಯಗಳು ಕಡಿಮೆಯಾಗಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.