
ತೆಹ್ರಾನ್/ವಾಷಿಂಗ್ಟನ್, 18 ಜುಲೈ (ಹಿ.ಸ.):
ಆ್ಯಂಕರ್:
ಅಮೆರಿಕಾ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಹೋರ್ಮುಜ್ ಜಲಸಂಧಿ ಪ್ರದೇಶ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಎರಡೂ ರಾಷ್ಟ್ರಗಳು ಪರಸ್ಪರ ದಾಳಿ ಮುಂದುವರಿಸಿದ್ದು, ಪರಿಸ್ಥಿತಿ ಆತಂಕಕಾರಿ ಹಂತ ತಲುಪಿದೆ.
ಇರಾನ್‌ನ ಹೋರ್ಮೊಜ್ಗಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ನಡೆದ ಅಮೆರಿಕದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಂ) ಈ ಆರೋಪವನ್ನು ತಳ್ಳಿಹಾಕಿದ್ದು, ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳು ಸಮುದ್ರದ ಬಾಂಬ್‌ಗಳಿಗೆ ತಾಗಿ ಸ್ಫೋಟ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ ಇರಾನ್ ಸೇನೆ ಬಹರೇನ್, ಜೋರ್ಡಾನ್ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಕುವೈತ್‌ನ ಕ್ಯಾಂಪ್ ಉದೈರಿ, ಅಲಿ ಅಲ್ ಸಲೇಮ್ ವಾಯುನೆಲೆ, ಜೋರ್ಡಾನ್‌ನ ಮುವಾಫಕ್ ಸಾಲ್ಟಿ ಹಾಗೂ ಅಲ್ ಅಜ್ರಾಕ್ ವಾಯುನೆಲೆ ಸೇರಿದಂತೆ ಹಲವು ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು ಇರಾನ್ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್ ವಿರುದ್ಧ ಸತತ ಏಳನೇ ರಾತ್ರಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಸೆಂಟ್‌ಕಾಂ ತಿಳಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಅಮೆರಿಕದ ದಾಳಿಯ ತೀವ್ರತೆ ಹೆಚ್ಚಾಗಿದೆ ಎಂದು ಆರೋಪಿಸಿದೆ.
ಯಜ್ದ್, ಲಾರ್, ಅಹ್ವಾಜ್, ಸಿರಿಕ್, ಬುಶೆಹರ್, ಬಂದರ್ ಅಬ್ಬಾಸ್, ದರಾಬ್ ಹಾಗೂ ಕೇಶಮ್ ದ್ವೀಪ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಹೋರ್ಮೊಜ್ಗಾನ್ ಪ್ರಾಂತ್ಯದಲ್ಲಿ ಎರಡು ಸೇತುವೆಗಳು ಹಾಗೂ ಒಂದು ಸುರಂಗಕ್ಕೆ ಹಾನಿಯಾಗಿದ್ದು, ವಿದ್ಯುತ್ ಕೇಂದ್ರ ಮತ್ತು ರೈಲು ನಿಲ್ದಾಣಗಳ ಮೇಲೆಯೂ ದಾಳಿ ನಡೆದಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.
ಐಆರ್‌ಜಿಸಿ, ಬುಶೆಹರ್ ಪ್ರದೇಶದ ಮೇಲೆ ಹಾರುತ್ತಿದ್ದ ಅಮೆರಿಕದ ಎಂ.ಕ್ಯೂ.-9 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಹಾಗೂ ಉತ್ತರ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಯುದ್ಧನೌಕೆಯ ಮೇಲೆ ಕರಾವಳಿಯಿಂದ ಸಮುದ್ರದತ್ತ ಹೊಡೆಯುವ ಕ್ರೂಸ್ ಕ್ಷಿಪಣಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿದೆ. ಜೊತೆಗೆ ಬಹರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೂ ದಾಳಿ ನಡೆಸಿರುವುದಾಗಿ ದೃಢಪಡಿಸಿದೆ.
ಇರಾನ್ ಹೇಳುವಂತೆ, ಅಮೆರಿಕ ಬೆಂಬಲಿತ ನಾಲ್ಕು ಹಡಗುಗಳು ಹೋರ್ಮುಜ್ ಜಲಸಂಧಿ ದಾಟಲು ಯತ್ನಿಸಿದ ವೇಳೆ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಅವುಗಳನ್ನು ತಡೆಗಟ್ಟಲಾಗಿದೆ. ಇದೇ ವೇಳೆ ಸಮುದ್ರದ ಬಾಂಬ್‌ಗಳು ಇದ್ದ ಮಾರ್ಗದಲ್ಲಿ ಸಂಚರಿಸಿದ ಎರಡು ತೈಲ ಟ್ಯಾಂಕರ್‌ಗಳಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ.
ಖತಾರ್ ತನ್ನ ರಾಜಧಾನಿ ದೋಹಾ ಸಮೀಪ ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆದಿರುವುದಾಗಿ ತಿಳಿಸಿದ್ದು, ಇರಾನ್ ವಿರುದ್ಧದ ಯಾವುದೇ ಸೇನಾ ಕಾರ್ಯಾಚರಣೆಗೆ ತಾನು ಒಪ್ಪಿಗೆ ನೀಡಿದೆ ಎಂಬ ವರದಿಗಳನ್ನು ತಳ್ಳಿಹಾಕಿದೆ. ದುಬೈ ನಗರದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಸುದ್ದಿಯನ್ನೂ ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇದರ ನಡುವೆ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಮೊಜ್ತಬಾ ಖಾಮೆನೇಯಿ ಅವರ ಹಿರಿಯ ಸೇನಾ ಸಲಹೆಗಾರ ಮೊಹ್ಸಿನ್ ರೆಜಾಯಿ, ಅಮೆರಿಕ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿದರೆ ಇರಾನ್ ಇನ್ನಷ್ಟು ತೀವ್ರ ಪ್ರತಿದಾಳಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಖಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಅಂತಾರಾಷ್ಟ್ರೀಯ ಸಮುದಾಯ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.