
ಬಾಗಲಕೋಟೆ, 17 ಜುಲೈ (ಹಿ.ಸ.)
ಆ್ಯಂಕರ್ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕತ್ವವು ಯುವ ಶಾಸಕರಿಗೆ ಆದ್ಯತೆ ನೀಡುವ ನಿಲುವು ತಳೆದಿದೆ ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಜೋರಾಗಿದೆ. ಈ ಬೆಳವಣಿಗೆಯಿಂದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಪಟ್ಟಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು, ಈಗಾಗಲೇ ಸಚಿವರಾಗಿದ್ದ ಹಳೆಯ ಮುಖಗಳಿಗಿಂತ ಹೊಸಬರು ಹಾಗೂ ಯುವ ಶಾಸಕರಿಗೆ ಆದ್ಯತೆ ನೀಡುವಂತೆ ಸೂಚಿಸಿರುವ ಮಾಹಿತಿ ಪಕ್ಷದ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಮೊದಲ ಬಾರಿಗೆ ಹಾಗೂ ಯುವ ವಯಸ್ಸಿನಲ್ಲಿ ಆಯ್ಕೆಯಾದ ಶಾಸಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದೆ. ಇವರಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತು ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಯುವ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಭೀಮಸೇನ ಚಿಮ್ಮನಕಟ್ಟಿ ಅವರು ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರರಾಗಿದ್ದು, ಮೊದಲ ಅವಧಿಯಲ್ಲೇ ಸದನದ ಒಳಗೂ ಹೊರಗೂ ಸಕ್ರಿಯ ಕಾರ್ಯಶೈಲಿಯಿಂದ ಗಮನ ಸೆಳೆದಿದ್ದಾರೆ. ಬಾಗಲಕೋಟೆ ಕ್ಷೇತ್ರದ ಉಮೇಶ್ ಮೇಟಿ ಅವರು ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ವಿಜಯಾನಂದ ಕಾಶಪ್ಪನವರ ಅವರು ಮಾಜಿ ಸಚಿವ ದಿ. ಎಸ್.ಆರ್. ಕಾಶಪ್ಪನವರ ಪುತ್ರರಾಗಿದ್ದು, ಎರಡನೇ ಅವಧಿಯ ಅನುಭವ ಹೊಂದಿರುವ ಕಾರಣ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳೆಂದು ಪರಿಗಣಿಸಲಾಗುತ್ತಿದೆ.
ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರ ಪೈಕಿ ಈ ಮೂವರು ಯುವ ಶಾಸಕರಾಗಿದ್ದು, ಉಳಿದ ಇಬ್ಬರು ಹಿರಿಯ ಶಾಸಕರಾಗಿದ್ದಾರೆ. ಕಾಂಗ್ರೆಸ್ ನಾಯಕತ್ವ ಯುವ ತಂಡಕ್ಕೆ ಆದ್ಯತೆ ನೀಡುವ ನಿರ್ಧಾರ ಕೈಗೊಂಡರೆ ಜಿಲ್ಲೆಯ ಈ ಮೂವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೊಸ ಮುಖಗಳಿಗೆ ಆದ್ಯತೆ ನೀಡುವ ತೀರ್ಮಾನವಾದರೆ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಹೆಚ್ಚಿನ ಅವಕಾಶ ದೊರೆಯಬಹುದು. ಮೊದಲ ಬಾರಿಗೆ ಶಾಸಕರಾಗಿದ್ದಾಗಲೇ ಸಚಿವರಾಗಿದ್ದ ಅವರ ತಂದೆ ಬಿ.ಬಿ. ಚಿಮ್ಮನಕಟ್ಟಿ ಅವರ ಇತಿಹಾಸ ಮತ್ತೆ ಮರುಕಳಿಸುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅದೇ ವೇಳೆ ಎರಡನೇ ಬಾರಿ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ ಅನುಭವವೂ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಸಚಿವ ಸ್ಥಾನಕ್ಕೆ ಅವರ ಹೆಸರು ಸಹ ಗಂಭೀರವಾಗಿ ಪರಿಗಣನೆಗೆ ಬರಬಹುದು ಎನ್ನಲಾಗುತ್ತಿದೆ. ಉಮೇಶ್ ಮೇಟಿ ಅವರ ಹೆಸರೂ ಚರ್ಚೆಯಲ್ಲಿದ್ದು, ಹೊಸ ಮುಖಗಳಿಗೆ ಆದ್ಯತೆ ಸಿಕ್ಕಲ್ಲಿ ಅವರಿಗೂ ಅವಕಾಶ ದೊರೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಎರಡನೇ ತಲೆಮಾರಿನ ನಾಯಕತ್ವ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿದ್ದರೂ, ಇದುವರೆಗೆ ಎರಡನೇ ತಲೆಮಾರಿನ ನಾಯಕರಿಗೆ ಸಚಿವ ಸ್ಥಾನ ದೊರೆತ ಉದಾಹರಣೆ ಇಲ್ಲ. ಈ ಬಾರಿ ಯುವ ಶಾಸಕರಿಗೆ ಅವಕಾಶ ದೊರೆತರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ.
ಆದರೆ, ಈಗಾಗಲೇ ಸಚಿವರಾಗಿದ್ದ ಮುಧೋಳ ಶಾಸಕ ಆರ್.ಬಿ. ತಿಮ್ಮಾಪುರ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ಸಚಿವ ಸ್ಥಾನಕ್ಕೆ ಮರಳುವ ಸಾಧ್ಯತೆಗಳು ಕಡಿಮೆಯಾಗಿವೆ ಎಂಬ ವಿಶ್ಲೇಷಣೆಯನ್ನು ಬಾಗಲಕೋಟೆಯ ರಾಜಕೀಯ ವಿಶ್ಲೇಷಕ ಹಾಗೂ ಹಿರಿಯ ಪತ್ರಕರ್ತ ಸಿದ್ದು ಧುತ್ತರಗವಿ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದ್ದು, ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆಯೇ, ಸಿಕ್ಕರೆ ಯಾರ ಪಾಲಾಗಲಿದೆ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande