
ಟೋಕಿಯೊ, 17 ಜುಲೈ (ಹಿ.ಸ.):
ಆ್ಯಂಕರ್:
ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಬಿ.ಡಬ್ಲ್ಯು.ಎಫ್. ಜಪಾನ್ ಓಪನ್ ಸೂಪರ್–750 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ಎದುರಾಳಿಯಾಗಿದ್ದ ಆತಿಥೇಯ ಜಪಾನ್‌ನ ಮಾಜಿ ವಿಶ್ವ ಚಾಂಪಿಯನ್ ನೊಜೋಮಿ ಒಕುಹಾರಾ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸಿಂಧುಗೆ ವಾಕ್‌ಓವರ್ ಲಭಿಸಿತು.
ಈ ಮೂಲಕ 2023ರ ಡೆನ್ಮಾರ್ಕ್ ಓಪನ್ ಬಳಿಕ ಮೊದಲ ಬಾರಿಗೆ ಸೂಪರ್–750 ಟೂರ್ನಿಯ ಸೆಮಿಫೈನಲ್‌ಗೆ ಸಿಂಧು ಪ್ರವೇಶಿಸಿದ್ದು, 2026ರ ಸಾಲಿನಲ್ಲಿ ಇದು ಅವರ ಮೂರನೇ ಸೆಮಿಫೈನಲ್ ಆಗಿದೆ. ಋತುವಿನ ಆರಂಭದಲ್ಲಿ ವಿಶ್ವ ಕ್ರಮಾಂಕ 18ನೇ ಸ್ಥಾನದಲ್ಲಿದ್ದ ಸಿಂಧು ಈಗ ಮತ್ತೆ ಅಗ್ರ–10ಕ್ಕೆ ಮರಳಿದ್ದು, ಪ್ರಸ್ತುತ 9ನೇ ಸ್ಥಾನದಲ್ಲಿದ್ದಾರೆ.
ಸೆಮಿಫೈನಲ್‌ನಲ್ಲಿ ಸಿಂಧು ಚೀನಾದ ಮಾಜಿ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದ ನಾಲ್ಕನೇ ಕ್ರಮಾಂಕದ ಚೆನ್ ಯುಫೆಯಿ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಚೆನ್, ದಕ್ಷಿಣ ಕೊರಿಯಾದ ಸಿಮ್ ಯು ಜಿನ್ ಅವರನ್ನು 21-10, 21-12 ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.
ಸಿಂಧು ಮತ್ತು ಚೆನ್ ಯುಫೆಯಿ ಇದುವರೆಗೆ 14 ಬಾರಿ ಮುಖಾಮುಖಿಯಾಗಿದ್ದು, ಚೆನ್ 8-6 ಮುನ್ನಡೆ ಸಾಧಿಸಿದ್ದಾರೆ. ಅಲ್ಲದೆ ಕಳೆದ ಐದು ಪಂದ್ಯಗಳಲ್ಲಿ ಸಿಂಧು ನಿರಂತರವಾಗಿ ಚೆನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಹೀಗಾಗಿ ಸೆಮಿಫೈನಲ್ ಪಂದ್ಯ ಸಿಂಧುಗೆ ಕಠಿಣ ಸವಾಲಾಗಿದ್ದು, ಗೆಲುವು ಸಾಧಿಸಿದರೆ ಸುಮಾರು ಮೂರು ವರ್ಷಗಳ ಬಳಿಕ ಸೂಪರ್–750 ಟೂರ್ನಿಯ ಫೈನಲ್‌ಗೆ ಪ್ರವೇಶಿಸುವ ಸಾಧನೆ ಮಾಡಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.