
ಗದಗ, 17 ಜುಲೈ (ಹಿ.ಸ.)
ಆ್ಯಂಕರ್:- ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತತ್ವ ಇಲಾಖೆಯ ಅಧೀನದ ಶ್ರೀ ಸರಸ್ವತಿ ಮೂರ್ತಿ ಭಗ್ನ ಪ್ರಕರಣವನ್ನು ಗದಗ ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಿಧಿಯಾಸೆ ಮತ್ತು ಮೂಢನಂಬಿಕೆಯಿಂದ ಕೃತ್ಯ ಎಸಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಜುಲೈ 10ರಂದು ಮಧ್ಯಾಹ್ನ ನಡೆದ ಈ ಘಟನೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಮೂರ್ತಿಯ ಎದೆ ಭಾಗಕ್ಕೆ ಕಬ್ಬಿಣದ ಚಾಣದಿಂದ ಹೊಡೆದು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಗದಗ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಬಾಲೇಶ ಕಳಸಣ್ಣವರ ಗದಗಕ್ಕೆ ಬಂದಿದ್ದ ವೇಳೆ ಶಾಬಾದಿಮಠ ಎಂಬುವವರ ಪುಸ್ತಕ ಮಳಿಗೆಯಿಂದ 'ಮಂತ್ರಸಿದ್ಧಿ' ಎಂಬ ಪುಸ್ತಕ ಖರೀದಿಸಿ ಓದಿದ್ದ. ಪುಸ್ತಕದಲ್ಲಿದ್ದ ಮಾಹಿತಿಯನ್ನು ನಂಬಿದ ಆತ, ಶ್ರೀ ಸರಸ್ವತಿ ಮೂರ್ತಿಯೊಳಗೆ ನಿಧಿ ಹುದುಗಿದೆ ಎಂಬ ತಪ್ಪು ಕಲ್ಪನೆ ಮಾಡಿಕೊಂಡು ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದಾನೆ. ನಂತರ ಜುಲೈ 10ರಂದು ಗದಗಕ್ಕೆ ಆಗಮಿಸಿ ಕಬ್ಬಿಣದ ಚಾಣದಿಂದ ಮೂರ್ತಿಗೆ ಹೊಡೆದು ಹಾನಿ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿಂದಿಕುರಬೇಟ ಗ್ರಾಮದ ಬಾಲೇಶ ಯಲ್ಲಪ್ಪ ಕಳಸಣ್ಣವರ (30), ಘಟಪ್ರಭಾದ ಆಸೀಫ್ ಮಂಜೂರಅಹಮದ್ ಭಾಗವಾನ್ (40), ಬಸು ಸಿದ್ದರಾಮ ಸೆಂಡೂರ (25) ಹಾಗೂ ರಾಜೇಸಾಬ್ ಹಸನಸಾಬ್ ನದಾಫ್ (63) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ವಿಠ್ಠಲ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಉಪಕರಣಗಳು ಹಾಗೂ ಎರ್ಟಿಗಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಂಗಮೇಶ ಶಿವಯೋಗಿ, ಪಿಎಸ್ಐಗಳಾದ ಬಿ.ಟಿ. ರಿತ್ತಿ ಮತ್ತು ರೇಣುಕಾ ಮುಂಡೇವಾಡಗಿ ನೇತೃತ್ವದ ವಿಶೇಷ ತಂಡ ಪ್ರಕರಣವನ್ನು ಭೇದಿಸಿದೆ. ತಾಂತ್ರಿಕ ವಿಭಾಗ, 'ಥರ್ಡ್ ಐ' ವಿಭಾಗ, ಘಟಪ್ರಭಾ ಪೊಲೀಸ್ ಠಾಣೆ ಹಾಗೂ ಗದಗ ನಗರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪ್ರಶಂಸಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP