ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಶಿಕ್ಷಣಾಧಿಕಾರಿ ಬಾಲಾಜಿ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಕೋಲಾರ, ೧೭ ಜುಲೈ (ಹಿ.ಸ):

ಆ್ಯಂಕರ್ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗುರಿ ಸಾಧನೆಯ ಛಲದೊಂದಿಗೆ ಮುನ್ನಡೆಯಿರಿ, ಜೀವನದಲ್ಲಿ ಶಿಸ್ತು,ಶ್ರದ್ಧೆ ಇದ್ದರೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಡಯಟ್ ಉಪನ್ಯಾಸಕ ಬಾಲಾಜಿ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು, ಪರಿಶ್ರಮ ನಿಮ್ಮದಾಗಿದ್ದರೆ ಗೆಲುವು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಹಿಂದೆ ಓಡೋಡಿ ಬರುತ್ತದೆ.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ, ಆತ್ಮ ಸ್ಥೈರ್ಯ ಸಂಭ್ರಮದಿಂದ ಪರೀಕ್ಷೆ ಎದುರಿಸಲು ಸಿದ್ದರಾಗಲು ಈಗಿನಿಂದಲೇ ಪ್ರಯತ್ನ ಮಾಡಿ, ಪರೀಕ್ಷೆ ಹತ್ತಿರವಾದಾಗ ಆತಂಕಪಡುವ ಬದಲಿಗೆ ಆರಂಭದಲ್ಲೇ ಶ್ರದ್ದೆ,ಪರಿಶ್ರಮವಿದ್ದರೆ ಪರೀಕ್ಷೆಯ ಭಯವೇ ಇರದು.ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು ತಮ್ಮ ಮಾರ್ಗದರ್ಶನದ ಮೂಲಕ ಶಕ್ತಿ ತುಂಬಿದ ಅವರು, ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇದೆ,ಆದರೆ ಅದನ್ನು ಹೊರತರುವ ಕೆಲಸವಾಗಬೇಕು, ನಿಮ್ಮಲ್ಲಿ ನಾನು ಸಾಧಕನಾಗಬೇಕು ಎಂದ ಛಲ ಬರಬೇಕು.ಯಶಸ್ಸಿನ ಮೆಟ್ಟಿಲನ್ನು ಲೀಲಾಜಾಲವಾಗಿ ಹತ್ತಲು ನಿಮಗೆ ಶಕ್ತಿ ಬೇಕು ಆದರೆ ಆಶಕ್ತಿ ಬರುವುದೇ ನಿಮ್ಮ ಪರಿಶ್ರಮ ಹಾಗೂ ಶ್ರದ್ಧೆಯ ಓದಿನಿಂದ ಎಂದು ಅರಿತು ಶಾಲೆಗೆ ಗೈರಾಗದೇ ಬನ್ನಿ, ಚೆನ್ನಾಗಿ ಓದಿ ಎಂದರು.

ಆರೋಗ್ಯ ರಕ್ಷಣೆ ಅತಿ ಮುಖ್ಯವಾಗಿದೆ, ನಿದ್ದೆ ಮಾಡುವ ಸಮಯದಲ್ಲಿ ನಿದ್ದೆ ಮಾಡಿ ನಂತರದ ಅವಧಿಯಲ್ಲಿ ಮೊಬೈಲ್, ಟಿವಿ, ಆಟೋಟ ಎಲ್ಲವನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಈ ಮೆಟ್ಟಿಲು ಹತ್ತುವವರೆಗೂ ತ್ಯಾಗ ಮಾಡಿ. ಪಠ್ಯಪುಸ್ತಕ ಓದಿ, ನೀವು ಶೇ.೧೦೦ ಸಾಧನೆಯ ಗುರಿ ಸಾಧಿಸಲು ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಶಕ್ತಿ ಪಡೆಯಬೇಕು, ಪಠ್ಯದಲ್ಲಿನ ಯಾವುದೇ ಪ್ರಶ್ನೆಗೆ ನಾನು ಉತ್ತರಿಸಬಲ್ಲೇ ಎಂಬ ದೃಢವಿಶ್ವಾಸ ಮೂಡುವ ರೀತಿಯಲ್ಲಿ ನಿಮ್ಮ ಓದು ಇರಬೇಕು. ಎಸ್ಸೆಸ್ಸೆಲ್ಸಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯಾಗಿದೆ, ಇದರಿಂದ ನಿಮ್ಮಲ್ಲಿ ಭಯ ಸಹಜ ಆದರೆ ನೀವು ಕಲಿಕೆಯಲ್ಲಿ ದೃಢತೆ ಸಾಧಿಸಿದರೆ ನೀವು ಹೆದರುವ ಅಗತ್ಯವೇ ಇಲ್ಲ, ಅದಕ್ಕಾಗಿಯೇ ಇಂದಿನಿಂದಲೇ ನಿಮ್ಮ ಪ್ರಯತ್ನವಿರಲಿ.ಅಂದದ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ, ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ, ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ.೧೦೦ ಅಂಕ ಪಡೆಯಲು ಸಹಕಾರಿಯಾಗಲಿದೆ. ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ತರಗತಿ ಕೊಠಡಿಯಲ್ಲಿ ನಿಮ್ಮ ಎಲ್ಲಾ ಆಲೋಚನೆ ಬದಿಗಿಡಿ, ಕೇವಲ ಶಿಕ್ಷಕರ ಮಾತು ಮಾತ್ರ ನಿಮ್ಮ ಕಿವಿಗೆ ಬೀಳುತ್ತಿರಬೇಕು ಅಂತಹ ಏಕಾಗ್ರತೆ ಸಾಧಿಸಿ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಬದಲಾವಣೆ ತನ್ನಿ, ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಶಾಲೆ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಸೂಚಿಸಿದರು.

ಶಿಕ್ಷಕರು ಕಲಿಕೆಯಲ್ಲಿ ಪ್ರಾಯೋಗಿಕ,ಕಲಿಕೋಪಕರಣ ಬಳಸಲು ಸೂಚಿಸಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ತಾಹೇರಾನುಸ್ರತ್,ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಶ್ವೇತಾ,ಸುಗುಣಾ,ರಮಾದೇವಿ, ಚೈತ್ರಾ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande