ಜಿಬಿಜಿಎ ಸಭೆ ನಡೆಸದೆ ಸರ್ಕಾರ ತನ್ನದೇ ಕಾಯ್ದೆ ಉಲ್ಲಂಘಿಸಿದೆ: ಆರ್. ಅಶೋಕ್
ಬೆಂಗಳೂರು, 17 ಜುಲೈ (ಹಿ.ಸ.): ಆ್ಯಂಕರ್: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಜಾರಿಗೆ ತಂದು ಬ್ರ್ಯಾಂಡ್ ಬೆಂಗಳೂರು ನಿರ್ಮಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ತನ್ನದೇ ಸರ್ಕಾರ ರೂಪಿಸಿದ ಕಾಯ್ದೆಯನ್ನು ತಾನೇ ಉಲ್ಲಂಘಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆ
Ashok file photo


ಬೆಂಗಳೂರು, 17 ಜುಲೈ (ಹಿ.ಸ.):

ಆ್ಯಂಕರ್:

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಜಾರಿಗೆ ತಂದು ಬ್ರ್ಯಾಂಡ್ ಬೆಂಗಳೂರು ನಿರ್ಮಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ತನ್ನದೇ ಸರ್ಕಾರ ರೂಪಿಸಿದ ಕಾಯ್ದೆಯನ್ನು ತಾನೇ ಉಲ್ಲಂಘಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಜಿಬಿಜಿಎ ಕಾಯ್ದೆಯ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದು ಕಡ್ಡಾಯವಾಗಿದ್ದರೂ, 2025ರ ಅಕ್ಟೋಬರ್ 10ರಂದು ಮೊದಲ ಸಭೆ ನಡೆದ ಬಳಿಕ ಬರೋಬ್ಬರಿ ಒಂಬತ್ತು ತಿಂಗಳು ಕಳೆದರೂ ಮತ್ತೊಂದು ಸಭೆ ನಡೆಸಿಲ್ಲ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿರುವ ಅವರು, ಕಾನೂನು ಸಾಮಾನ್ಯ ಜನರಿಗೆ ಮಾತ್ರವೇ? ಸರ್ಕಾರಕ್ಕೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ದಿನನಿತ್ಯ ರೀಲ್ಸ್, ಫೇಸ್‌ಬುಕ್ ಲೈವ್ ಹಾಗೂ ಪ್ರಚಾರ ಕಾರ್ಯಕ್ರಮಗಳಿಗೆ ಸಮಯವಿರುವ ಸರ್ಕಾರಕ್ಕೆ ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಕಡ್ಡಾಯ ಸಭೆ ನಡೆಸಲು ಸಮಯವಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.

ಸಭೆಯ ತೀರ್ಮಾನಗಳನ್ನು ಮೂರು ದಿನಗಳೊಳಗೆ ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ನಿಯಮವಿದ್ದರೂ, ಇದುವರೆಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಏನನ್ನು ಮುಚ್ಚಿಡಲಾಗುತ್ತಿದೆ? ಯಾರನ್ನು ರಕ್ಷಿಸಲಾಗುತ್ತಿದೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಬಿಬಿಎಂಪಿಯನ್ನು ಪುನರ್‌ರಚಿಸಿ ಜಿಬಿಜಿಎ ಜಾರಿಗೆ ತಂದ ಪರಿಣಾಮವಾಗಿ ಬೆಂಗಳೂರಿನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ ಎಂದು ಆರೋಪಿಸಿರುವ ಅವರು, ರಸ್ತೆಗಳು ಗುಂಡಿಮಯವಾಗಿವೆ, ಸಂಚಾರ ದಟ್ಟಣೆ ಹೆಚ್ಚಿದೆ, ಕಸದ ಸಮಸ್ಯೆ ಉಲ್ಬಣಗೊಂಡಿದೆ, ಮಳೆ ಬಂದರೆ ಪ್ರವಾಹ ಹಾಗೂ ಮಳೆ ಬರದಿದ್ದರೆ ನೀರಿನ ಬಿಕ್ಕಟ್ಟು ಎದುರಾಗುತ್ತಿದೆ. ಇದುವೇ ಸರ್ಕಾರ ಹೇಳುವ ಬ್ರ್ಯಾಂಡ್ ಬೆಂಗಳೂರುವೇ ಎಂದು ಪ್ರಶ್ನಿಸಿದ್ದಾರೆ.

ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದರೂ ನೆಲಮಟ್ಟದಲ್ಲಿ ಯಾವುದೇ ಸಾಧನೆ ಕಾಣುತ್ತಿಲ್ಲ. ಕಾಯ್ದೆಯಲ್ಲಿ ಭರವಸೆ ನೀಡಿದ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ಬೆಂಗಳೂರು ಒಂದು ಕೋಟಿ ಐವತ್ತು ಲಕ್ಷಕ್ಕೂ ಹೆಚ್ಚು ಜನರ ಬದುಕಿನ ನಗರವಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದ ಪ್ರಚಾರದ ವೇದಿಕೆಯಾಗಿ ಬಳಸಬಾರದು ಎಂದು ಹೇಳಿದ್ದಾರೆ.

ತಕ್ಷಣವೇ ಜಿಬಿಜಿಎ ಸಭೆ ಕರೆದು, ಕಾಯ್ದೆಯ ಪ್ರಕಾರ ಕೈಗೊಂಡಿರುವ ಎಲ್ಲಾ ನಿರ್ಧಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಕಾನೂನು ಉಲ್ಲಂಘಿಸಿ ಬೆಂಗಳೂರಿನ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಈ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರು ಜನತೆ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande