
ಕೋಲಾರ, ೧೭ ಜುಲೈ (ಹಿ.ಸ):
ಆ್ಯಂಕರ್ : ಬಂಗಾರಪೇಟೆ ತಾಲೂಕಿನ ದೊಡ್ಡಚಿನ್ನಹಳ್ಳಿಯ ಸರ್ಕಾರಿ ಕನ್ನಡ-ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಇಎಂಎಲ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಪೀಠೋಪಕರಣ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಬೆಮೆಲ್ ಉಪ ಮಹಾಪ್ರಬಂಧಕ ಶಿವಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಿಇಎಂಎಲ್ ಸಂಸ್ಥೆ ನೆರವಾಗುತ್ತಿದೆ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು, ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ನಾವು ನೀಡುತ್ತಿರುವ ಈ ಸಣ್ಣ ಸಹಾಯವು ನಿಮ್ಮ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಬೆಮೆಲ್ ಹಿರಿಯ ವ್ಯವಸ್ಥಾಪಕ ತುಳಸಿ ಮೋಹನ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿ. ಮಕ್ಕಳು ಕೇವಲ ಅಂಕಗಳಿಗಾಗಿ ಓದದೆ, ಜ್ಞಾನಾರ್ಜನೆಗಾಗಿ ಓದಬೇಕು. ನಮ್ಮ ಸಂಸ್ಥೆಯು ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಇಎಂಎಲ್ ಲೇಡಿಸ್ ಕ್ಲಬ್ನ ಗೀತಾ ಮೋಹನ್ ಅವರು ವಿದ್ಯಾರ್ಥಿಗಳಿಗೆ ಪೆನ್ಸಿಲ್ ಕಿಟ್ಗಳನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಇಎಂಎಲ್ ರಕ್ಷಣಾ ವಿಭಾಗದ ಡಿಜಿಎಂ ಸುರೇಶ್ ಬಾಬು, ಉದ್ಯಮಿ ವೆಂಕಟೇಶ್ ಸೇರಿದಂತೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್