
ಕೋಲಾರ, ೧೭ ಜುಲೈ (ಹಿ.ಸ):
ಆ್ಯಂಕರ್: ಕೋಲಾರ ಹಾಲು ಒಕ್ಕೂಟದಲ್ಲಿ (ಕೋಮುಲ್) ನಡೆದಿರುವ ನೇಮಕಾತಿ ಅಕ್ರಮ ಸೇರಿದಂತೆ ವಿವಿಧ ಅವ್ಯವಹಾರಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ.
ಈ ಕುರಿತು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟಚಲಪತಿ, ಅಕ್ರಮಗಳ ವಿರುದ್ಧದ ಕಾನೂನು ಹೋರಾಟದಲ್ಲಿ ಮೊದಲ ಜಯ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದ0ತೆ ೯೯ ಮಂದಿಯನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಆದೇಶಿಸಿದೆ ಎಂದು ತಿಳಿಸಿದರು. ಒಕ್ಕೂಟದ ಹಿಂದಿನ ಆಡಳಿತ ಮಂಡಳಿಯಲ್ಲಿ ೭೨ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅರ್ಹ ಅಭ್ಯರ್ಥಿಗಳನ್ನು ವಂಚಿಸಿ, ಹಣ ನೀಡಿದ ಅನರ್ಹರಿಗೆ ಎರಡು ಒಎಂಆರ್ ಹಾಳೆಗಳನ್ನು ಸೃಷ್ಟಿಸಿ ಉದ್ಯೋಗ ನೀಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಹಗರಣದಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಸೇರಿದಂತೆ ಹಲವು ನಿರ್ದೇಶಕರು ಮತ್ತು ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಹಾಗೂ ಇಡಿ ಸಂಸ್ಥೆಗಳು ನಡೆಸುತ್ತಿದ್ದರೂ, ಆರೋಪಿ ಅಧಿಕಾರಿ ಗೀತಾ ಅವರನ್ನು ವಿಚಾರಣೆಗೆ ಒಳಪಡಿಸಲು ಒಕ್ಕೂಟದ ಆಡಳಿತ ಮಂಡಳಿ ಅನುಮತಿ ನೀಡದೆ ತನಿಖೆಗೆ ಅಡ್ಡಿಪಡಿಸುತ್ತಿದೆ ಎಂದು ಅವರು ದೂರಿದರು. ಅಧ್ಯಕ್ಷರು ತನಿಖೆಗೆ ಸಹಕರಿಸುವುದಾಗಿ ಹೇಳಿಕೆ ನೀಡುತ್ತಲೇ, ಮತ್ತೊಂದೆಡೆ ವಿಚಾರಣೆಗೆ ಅನುಮತಿ ನಿರಾಕರಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. ನೇಮಕಾತಿ ಅಕ್ರಮವನ್ನು ರದ್ದುಪಡಿಸುವಂತೆ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಗಮನಕ್ಕೂ ಈ ವಿಷಯವನ್ನು ತರಲಾಗುವುದು ಎಂದರು.
ನೀಟ್ ಪರೀಕ್ಷೆ ಅಕ್ರಮದ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವ ಕಾಂಗ್ರೆಸ್, ಕೋಮುಲ್ ನೇಮಕಾತಿ ವಿಚಾರದಲ್ಲೂ ಅದೇ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಅವರು ಆಗ್ರಹಿಸಿದರು. ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಗೂಳಿಗಾನಹಳ್ಳಿ ನಾಗರಾಜ್ ಮಾತನಾಡಿ, ಪರೀಕ್ಷಾ ಮೇಲುಸ್ತುವಾರಿ ವಹಿಸಿದ್ದ ವಿಶ್ವವಿದ್ಯಾಲಯ ಹಾಗೂ ಒಎಂಆರ್ ಮುದ್ರಿಸಿದ ಖಾಸಗಿ ಸಂಸ್ಥೆಯ ಮಾಲೀಕರನ್ನು ಬಂಧಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್