
ಗದಗ, 17 ಜುಲೈ (ಹಿ.ಸ.):
ಆ್ಯಂಕರ್ :ರೈತರು ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ (ಐಪಿಎಂ) ಪದ್ಧತಿಯನ್ನು ಅಳವಡಿಸಿಕೊಂಡು ಸುಸ್ಥಿರ ಕೃಷಿಯತ್ತ ಒಲವು ತೋರಬೇಕು. ಜೊತೆಗೆ ಬೆಳೆ ಸಮೀಕ್ಷೆಯನ್ನು ತಕ್ಷಣ ಪೂರ್ಣಗೊಳಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟಿಲ್ ಕರೆ ನೀಡಿದರು.
ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಜ್ಞಾನಿಗಳ ತಂಡ ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿತು. ಗದಗ ತಾಲೂಕಿನ ಚಿಕ್ಕಹಂದಿಗೊಳ ಮತ್ತು ಕುರ್ತಕೋಟಿ, ಶಿರಹಟ್ಟಿ ತಾಲೂಕಿನ ಮಾಗಡಿ ಹಾಗೂ ಬೆಳ್ಳಟ್ಟಿ, ಮುಂಡರಗಿ ತಾಲೂಕಿನ ಬಾಗೇವಾಡಿ ಮತ್ತು ಮೇವುಂಡಿ, ರೋಣ ತಾಲೂಕಿನ ಬೆಳವಣಕಿ ಹಾಗೂ ನರಗುಂದ ತಾಲೂಕಿನ ಹದ್ಲಿ ಗ್ರಾಮಗಳಲ್ಲಿ ಬೆಳೆದಿರುವ ಹೆಸರು, ಮೆಕ್ಕೆಜೋಳ, ಹತ್ತಿ ಮತ್ತು ಶೇಂಗಾ ಬೆಳೆಗಳ ಪರಿಶೀಲನೆ ನಡೆಸಲಾಯಿತು.
ಕ್ಷೇತ್ರ ಭೇಟಿಯ ವೇಳೆ ತೇವಾಂಶದ ಕೊರತೆಯಿಂದ ಬಹುತೇಕ ಬೆಳೆಗಳು ಕುಂಠಿತಗೊಂಡಿರುವುದು ಕಂಡುಬಂದಿತು. ವಿಶೇಷವಾಗಿ ಹೆಸರು ಬೆಳೆಯಲ್ಲಿ 40 ರಿಂದ 50 ದಿನಗಳ ಬೆಳವಣಿಗೆಯ ಹಂತದಲ್ಲಿ ಹಳದಿ ನಂಜಾಣು ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ರೋಗಪೀಡಿತ ಗಿಡಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳುವಂತೆ ಅಧಿಕಾರಿಗಳು ರೈತರಿಗೆ ಸೂಚಿಸಿದರು. ನಂತರ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಅಸೆಟಮಿಪ್ರಿಡ್ ಅಥವಾ 0.3 ಗ್ರಾಂ ಥಿಯಾಮೆಥೋಕ್ಸಾಮ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು 200 ಲೀಟರ್ ಸಿಂಪರಣಾ ದ್ರಾವಣ ಬಳಸುವಂತೆ ಹಾಗೂ 13:0:45 ಪೊಟ್ಯಾಶಿಯಂ ನೈಟ್ರೇಟ್ ಅನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವಂತೆ ಸಲಹೆ ನೀಡಲಾಯಿತು. ಮುಂದಿನ ಹಂಗಾಮಿನಲ್ಲಿ ಬಿತ್ತನೆಗೂ ಮುನ್ನ ಕ್ಯಾಪ್ಟಾನ್ ಅಥವಾ ಥೈರಾಮ್ ಬಳಸಿ ಬೀಜೋಪಚಾರ ಕಡ್ಡಾಯವಾಗಿ ಮಾಡುವಂತೆ ತಿಳಿಸಲಾಯಿತು.
ಮೆಕ್ಕೆಜೋಳ ಬೆಳೆಯಲ್ಲಿ 25 ರಿಂದ 50 ದಿನಗಳ ಬೆಳವಣಿಗೆಯ ಹಂತದಲ್ಲಿ ತೇವಾಂಶದ ಕೊರತೆಯಿಂದ ಬೆಳೆಯ ಬೆಳವಣಿಗೆ ಕುಂಠಿತವಾಗಿದ್ದರೂ ಸದ್ಯ ಯಾವುದೇ ಪ್ರಮುಖ ಕೀಟ ಅಥವಾ ರೋಗಬಾಧೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶೇಂಗಾ ಬೆಳೆಯಲ್ಲಿ 30 ರಿಂದ 35 ದಿನಗಳ ಬೆಳವಣಿಗೆಯ ಹಂತದಲ್ಲಿ ತೇವಾಂಶದ ಕೊರತೆ ಪರಿಣಾಮ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಬುಡಕೊಳೆ ಹಾಗೂ ಕತ್ತುಕೊಳೆ ರೋಗ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದರು. ಇದನ್ನು ತಡೆಗಟ್ಟಲು ಚೆನ್ನಾಗಿ ಕೊಳೆತ ಗೊಬ್ಬರ ಅಥವಾ ಕಾಂಪೋಸ್ಟ್ ಬಳಕೆ, ಸಣಬು ಹಸಿರು ಗೊಬ್ಬರ ಬೆಳೆಸುವುದು, ಟ್ರೈಕೋಡರ್ಮಾ ಶಿಲೀಂಧ್ರನಾಶಕ ಮಿಶ್ರಿತ ಕಾಂಪೋಸ್ಟ್ ಅಥವಾ ಬೇವಿನ ಹಿಂಡಿಯನ್ನು ಭೂಮಿಗೆ ಸೇರಿಸುವಂತೆ ಸಲಹೆ ನೀಡಿದರು. ಜೊತೆಗೆ ಕ್ಯಾಪ್ಟಾನ್, ಥೈರಾಮ್ ಅಥವಾ ವಿಟಾವ್ಯಾಕ್ಸ್ ಬಳಸಿ ಬೀಜೋಪಚಾರ ನಡೆಸುವಂತೆ ರೈತರಿಗೆ ತಿಳಿಸಿದರು.
ಕ್ಷೇತ್ರ ಭೇಟಿಯಲ್ಲಿ ಉಪ ಕೃಷಿ ನಿರ್ದೇಶಕಿ ಶ್ರೀಮತಿ ಜಿ.ಎಸ್. ಸ್ಪೂರ್ತಿ, ವಿವಿಧ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಆತ್ಮ ಸಿಬ್ಬಂದಿ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಜ್ಞಾನಿಗಳಾದ ಡಾ. ಸಿ.ಎಂ. ರಫೀ, ಡಾ. ಸಂಗಶೆಟ್ಟಿ, ಡಾ. ಕಲಾವತಿ ಮತ್ತು ಡಾ. ಪ್ರಭಾವತಿ ಭಾಗವಹಿಸಿ ರೈತರಿಗೆ ಬೆಳೆ ಸಂರಕ್ಷಣೆ, ಕೀಟ-ರೋಗ ನಿಯಂತ್ರಣ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಮಾರ್ಗದರ್ಶನ ನೀಡಿದರು.
ರೈತರು ಕೃಷಿ ಇಲಾಖೆಯ ತಾಂತ್ರಿಕ ಸಲಹೆಗಳನ್ನು ಅನುಸರಿಸಿ ಬೆಳೆಗಳ ನಿಯಮಿತ ಪರಿಶೀಲನೆ ನಡೆಸಿದರೆ ಕೀಟ ಹಾಗೂ ರೋಗಬಾಧೆಯನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP