






ಬಳ್ಳಾರಿ, 16 ಜುಲೈ (ಹಿ.ಸ.)
ಕೊಪ್ಪಳ ರೇಲ್ವೆ ನಿಲ್ದಾಣ ಸ್ಥಾಪನೆ ಒಂದು ಚಾರಿತ್ರಿಕ ನೋಟದ ಲೇಖನ.
ಕೊಪ್ಪಳ ನಾಡಿನ ಚರಿತ್ರೆ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದರ ನಿಖರವಾದ ಚರಿತ್ರೆ ಅರಿಯುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಈ ಪರಿಸರವು ಪುರಾಣ, ರಾಮಾಯಣ ಮತ್ತು ಮಹಾಭಾರತಗಳ ಸಂಬಂಧ ಹೊಂದಿರುವ್ಯದರಿಂದ; ಈ ಪರಿಸರದ ಚರಿತ್ರೆ ಸಾವಿರಾರು ವರ್ಷಗಳ ಹಿಂದೆ ಹೋಗುತ್ತದೆ.
ಇಂತಹ ಮಹಾನ್ ಪುರಾಣಗಳಲ್ಲಿ ಈ ಪರಿಸರದ ಉಲ್ಲೇಖಗಳಿರುವುದರಿಂದ ಅದಕ್ಕೆ ಇನ್ನಷ್ಟು ಪುಷ್ಟಿ ಕೊಡುತ್ತದೆ.
ಅಧಿಕೃತವಾಗಿ ಅಶೋಕನ ಲಿಖಿತ ಶಾಸನಗಳಿಂದ ಹಿಡಿದು ಇಂದಿನ ಚರಿತ್ರೆಯವರೆಗೆ ನೂರಾರು ಘಟನಾವಳಿಗಳು, ಸಂಗತಿಗಳು ಏನೇನೊ ನಡೆದು ಹೋಗಿವೆ. ಸಾವು-ನೋವುಗಳು ಸಾಕಷ್ಟು ನಡೆದು ಇತಿಹಾಸದಲ್ಲಿ ದಾಖಲಾಗಿವೆ. ಇನ್ನು ಕೆಲವುಗಳು ದಾಖಲಾಗದೇ ಹಾಗೆಯೇ ಉಳಿದು ಹೋಗಿವೆ. ಸಾವು-ನೋವುಗಳ ಜೊತೆಗೆ ಸ್ಮಾರಕ, ಗುಡಿ-ಗುಂಡಾರ, ಕಟ್ಟಡ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳು ನಡೆದಿವೆ.ಕೋಟೆ-ಕೊತ್ತಲಗಳನ್ನು ನಿರ್ಮಿಸಿ ಈ ಪ್ರದೇಶವನ್ನು ಸಂರಕ್ಷಿಸಿದ ಸಂಗತಿಗಳು ಜರುಗಿವೆ. ಇಲ್ಲಿ ಅಭಿವೃದ್ಧಿ ಕಾರ್ಯಗಳಂತೂ ಸಾಕಷ್ಟು ನಡೆದುಇದನ್ನುಉನ್ನತ ಮಟ್ಟದಲ್ಲಿಕೊಂಡೊಯ್ದಿದ್ದಿದೆ.
ಅಂತಹ ಅಭಿವೃದ್ಧಿ ಕೆಲಸಗಳಲ್ಲಿ ‘ಕೊಪ್ಪಳ ರೇಲ್ವೆ ನಿಲ್ದಾಣ’ ನಿರ್ಮಾಣವೂ ಸಹ ಒಂದು.
ಬ್ರಿಟಿಷ್ ಅವಧಿಯಲ್ಲಿ ಅತ್ತ ಮುಂಬೈ ಪ್ರಾಂತ್ಯದ ಬಳ್ಳಾರಿ ಮತ್ತು ಇತ್ತ ಮದ್ರಾಸ್ ಪ್ರಾಂತ್ಯದ ಗದಗದವರೆಗೆ ಮಾತ್ರ ರೈಲು ಸಂಪರ್ಕವಿತ್ತು. ಗದಗದಿಂದ ಕೊಪ್ಪಳ ಮಾರ್ಗವಾಗಿ ಬಳ್ಳಾರಿಗೆ ಸಂಪರ್ಕಿಸುವ ರೈಲಿನ ಯಾವುದೇ ವ್ಯವಸ್ಥೆ ಇರಲಿಲ್ಲ. ಆಗ ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಬ್ರಿಟಿಷರಿಗೆ ಸರಕು ಸಾಗಾಣಿಕೆಯು ತುಂಬಾ ತೊಂದರೆಯಾಗಿತ್ತು. ಮುಂಬೈ ಪ್ರಾಂತ್ಯದಿಂದ ಮದ್ರಾಸ್ ಪ್ರಾಂತ್ಯಕ್ಕೆ ಮತ್ತು ಮದ್ರಾಸ್ ಪ್ರಾಂತ್ಯದಿಂದ ಮುಂಬೈ ಪ್ರಾಂತ್ಯಕ್ಕೆ ಸರಕು ಸಾಗಾಣಿಕೆಯ ವ್ಯವಸ್ಥೆ ಬ್ರಿಟಿಷರಿಗೆ ತುಂಬಾ ಅಗತ್ಯವಾಗಿತ್ತು. ಹೀಗಾಗಿ ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಸಂಪರ್ಕ ಕಲ್ಪಿಸಿ ಮದ್ರಾಸ್ ಮತ್ತು ಮುಂಬೈ ಪ್ರಾಂತ್ಯ ಎರಡನ್ನೂ ಕಲ್ಪಿಸುವುದು ಅತ್ಯವಶ್ಯವಾಗಿತ್ತು.
ಹೈದರಾಬಾದಿನ ನಿಜಾಮನು ಕೊಪ್ಪಳ ವಿಭಾಗವನ್ನು ‘ಸಾಲರಜಂಗ ಬಹದ್ದೂರ’ ಎಂಬ ಬಿರುದಾಂಕಿತ ಮೀರ್ತುರಾಬ್ಅಲೀಖಾನ್ ಬಹದ್ದೂರ್(1829-1883) ಎಂಬುವವನನ್ನು ಕೊಪ್ಪಳದ ಜಾಹಗೀರ್ ಆಗಿ ನೇಮಿಸಿದ್ದನು. ಈತನನ್ನು ಒಂದನೇ ಸಾಲರಜಂಗ್ ಬಹದ್ದೂರ್ ಎಂತಲೂಕರೆಯಲಾಗುತ್ತದೆ. ಇವನ ತರುವಾಯ ಇವನ ಹಿರಿಯ ಮಗ ನವಾಬ ಮೀರ್ಲಾಯಕ್ಅಲೀಖಾನ್ನು(1862ರಲ್ಲಿ ಜನನ) ಕೊಪ್ಪಳ ಜಾಹಗೀರ್ ಆಗಿ ನೇಮಕವಾದನು. ಇವನನ್ನು 2ನೇ ಸಾಲರ್ಜಂಗ್ ಎಂದು ಕರೆಯಲಾತ್ತಿತ್ತು.
ಬ್ರಿಟಿಷರಿಗೆ ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಮಾರ್ಗ ಸಂಪರ್ಕದ ಕೆಲಸದಲ್ಲಿ ಹೈದರಾಬಾದಿನ ನಿಜಾಮನ ಮತ್ತು ಸಾಲರಜಂಗ್ನ ಅವಶ್ಯಕತೆ ಬಹಳ ಇತ್ತು. ಹೀಗಾಗಿ ಬ್ರಿಟಿಷ್ ಸರಕಾರ ಕೊಪ್ಪಳ ಜಾಹಗೀರ ಅಧಿಕಾರಿಯಾಗಿದ್ದ ಸಾಲರಜಂಗ್ನ ಸಹಾಯ ಬೇಡಿದರು. ಸಾಲಾರ್ಜಂಗನಿಗೂ ಸರಕು ಸಾಕಾಣಿಕೆಗಾಗಿ ರೈಲಿನ ಸಂಪರ್ಕ ಬೇಕಾಗಿತ್ತು. ಜೊತೆಗೆ ಅವರ ಮಿಲ್ಗಳಿಗೆ ಸರಕುಗಳು ಮತ್ತು ತಯಾರಿಸಿದ ವಸ್ತುಗಳ ಸಾಕಾಣಿಕೆಗಾಗಿ ರೈಲಿನ ಸಂಪರ್ಕ ಬೇಕಾಗಿತ್ತು. ಮುಖ್ಯವಾಗಿ ಹುಲಗಿ ಸುತ್ತಲಿನಲ್ಲಿದ್ದ ತಮ್ಮ ಕಂಪನಿಗಳಿಗೆ ಸಂಪರ್ಕದ ಅವಶ್ಯಕತೆಗಾಗಿ ಹುಲಗಿಯಲ್ಲಿ ನಿಲ್ದಾಣದ ವ್ಯವಸ್ಥೆಯನ್ನೂ ಮಾಡುವುದು ಅನಿವಾರ್ಯವಾಗಿತ್ತು.
2ನೇ ಸಾಲರಜಂಗ್ನ ಅವಧಿಯಲ್ಲಿ ಕೊಪ್ಪಳ ತಾಲ್ಲೂಕು ಅಧಿಕಾರಿಯಾಗಿ ನರಸಿಂಗರಾಯರು ಕಾರ್ಯನಿರ್ವಹಿಸುತ್ತಿದ್ದರು. ಈ ನರಸಿಂಗರಾಯರ ಅವಧಿಯಲ್ಲೇ ಕೊಪ್ಪಳದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಕೊಪ್ಪಳದ ನಕಾಶೆಯನ್ನು ಮೊದಲಿಗೆ ತಯಾರಿಸಿ ಅದಕ್ಕೆ ಒಂದು ರೂಪಕೊಟ್ಟು ನಗರವನ್ನಾಗಿಸಿದವರೇ ಈ ನರಸಿಂಗರಾಯರು.
ಪಾಠಶಾಲೆ, ಧರ್ಮಶಾಲೆಗಳನ್ನು ಕಟ್ಟಿದರು. ಅನೇಕ ಮಸೀದಿ, ಮಂದಿರಗಳನ್ನು ನಿರ್ಮಿಸಿದನು. ಊರಿನ ಸುತ್ತಲೂ ನಾಲ್ಕು ಅಗಸಿಗಳನ್ನು ನಿರ್ಮಿಸಿ ಈ ನಗರಕ್ಕೆ ರಕ್ಷಾಕವಚ ನಿರ್ಮಿಸಿದನು. ಕೊಪ್ಪಳ ಜನತೆಗೆ ಕುಡಿಯುವ ನೀರಿಗಾಗಿ ಹುಲಿಕೆರೆಯನ್ನು ಕಟ್ಟಿ ಮನೆ-ಮನೆಗೆ ನೀರು ಸರಬರಾಜಿನ ವ್ಯವಸ್ಥೆ ಕಲ್ಪಿಸಿದನು. ಇಂತಹ ಕ್ರಿಯಾಶೀಲ ವ್ಯಕ್ತಿಯ ಅವಧಿಯಲ್ಲೇ ಅದು 2ನೇ ಸಾಲರಜಂಗ್ನವಾಬ ಮೀರ್ಲಾಯಕ್ಅಲೀಖಾನ್ಅವಧಿಯಲ್ಲಿ(ಸುಮಾರು 1860ರಿಂದ 1870ರ ಅವಧಿಯಲ್ಲಿ) ಗದಗದಿಂದ ಬಳ್ಳಾರಿಗೆ ರೈಲು ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಿದರು. ಈ ಅವಧಿಯಲ್ಲೇ ಕೊಪ್ಪಳ ರೇಲ್ವೆ ನಿಲ್ದಾಣ ನಿರ್ಮಾಣವಾಯಿತು. ಆದರೆ ಈ ಒಂದು ದಶಕದಲ್ಲಿ ಯಾವ ವರ್ಷದಲ್ಲಿ ಅಥವಾ ಯಾವ ದಿನಾಂಕದಲ್ಲಿ ಈ ಕೊಪ್ಪಳ ರೇಲ್ವೆ ನಿಲ್ದಾಣ ನಿರ್ಮಾಣವಾಯಿತೆಂಬ ದಾಖಲೆಗಳು ನನಗೆ ಲಭ್ಯವಾಗುತ್ತಿಲ್ಲ. ಹುಬ್ಬಳ್ಳಿ, ಗದಗ, ಕೊಪ್ಪಳ ಮತ್ತು ಹುಲಗಿ ಗ್ರಾಮಗಳ ರೇಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಯಿತಾದರೂ ದಾಖಲೆಗಳ ಕೊರತೆಯುಂಟಾಗಿ ಕೊಪ್ಪಳ ರೈಲ್ವೆ ನಿಲ್ದಾಣದ ನಿರ್ಮಾಣದ ಅಧಿಕೃತ ವರ್ಷ ಅಥವಾ ದಿನಾಂಕ ನನಗೆ ಲಭ್ಯವಾಗಿರುವುದಿಲ್ಲ. ಅದೇನೇ ಇದ್ದರೂ ಕೊಪ್ಪಳ ರೇಲ್ವೆ ನಿಲ್ದಾಣ ನಿರ್ಮಾಣವಾಗಿ ಕೊಪ್ಪಳ ಜನತೆಗೆ ತುಂಬಾ ಅನುಕೂಲವಾಗಿದ್ದು ಮಾತ್ರ ಸುಳ್ಳಲ್ಲ. ಆ ರೇಲ್ವೆ ನಿಲ್ದಾಣದ ಮೂಲಕ ಕೊಪ್ಪಳದಿಂದ ದೇಶದ ವಿವಿಧ ಪ್ರದೇಶಗಳಿಗೆ ಪ್ರಯಾಣ ಪ್ರಾರಂಭವಾದದ್ದು ಕೊಪ್ಪಳ ಜನತೆಗೆ ಸಂತಸ ಉಂಟುಮಾಡಿದ್ದನ್ನು ಯಾವ ಲೆಕ್ಕದಿಂದಲೂ ಎಣಿಸಲು ಸಾಧ್ಯವಾಗದು.
ಆಕರ ಗ್ರಂಥಗಳು:-
1. ವೀರನಗೌಡರುಡಿ.ಎಸ್. ಪಾಟೀಲ, ಸಾಲರಜಂಗ ಬಹದ್ದೂರಇವರಚರಿತ್ರೆ, ಶ್ರೀ ಚನ್ನಪ್ಪ ಮಾಳಶೆಟ್ಟಿ, ಪ್ರಕಾಶನ, ಗದಗ-1941
2. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕøತಿಕಇತಿಹಾಸ(ಪರೀಷ್ಕøತಎರಡನೆ ಮುದ್ರಣ),ಮೇಘನಾ ಪ್ರಕಾಶನ, ಕೊಪ್ಪಳ-2020
3. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಚರಿತ್ರೆ ಮತ್ತು ಸಂಸ್ಕøತಿಯ ಹುಡುಕಾಟ, ಮೇಘನಾ ಪ್ರಕಾಶನ, ಕೊಪ್ಪಳ-2023
ಲೇಖಕರು:
ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ:9448570340
Email: skotnekal@gmail.com
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್