
ಬಾಗಲಕೋಟೆ, 11 ಜುಲೈ (ಹಿ.ಸ.)
ಆ್ಯಂಕರ್ : ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಸುರಕ್ಷಿತ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಚಾಣಕ್ಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ.), ಬಾದಾಮಿ ಹಾಗೂ ತಾಲೂಕು ಪಂಚಾಯತ್ ಕಾರ್ಯಾಲಯ, ಬಾದಾಮಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಶೌಚಾಲಯ ಬಳಕೆಯ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮೂಲಕ ಗ್ರಾಮೀಣ ಜನರಲ್ಲಿ ಶೌಚಾಲಯ ಬಳಕೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಂದು ಕುಟುಂಬವೂ ಕಡ್ಡಾಯವಾಗಿ ಶೌಚಾಲಯ ಬಳಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಲಾಗಿದೆ.
ಬಯಲು ಶೌಚ ಪದ್ಧತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಹೆಚ್ಚಾಗುವುದಲ್ಲದೆ, ಪರಿಸರ ಮಾಲಿನ್ಯ ಉಂಟಾಗುತ್ತದೆ. ವಿಶೇಷವಾಗಿ ಮಕ್ಕಳ ಆರೋಗ್ಯ, ಮಹಿಳೆಯರ ಸುರಕ್ಷತೆ ಮತ್ತು ಗೌರವದ ದೃಷ್ಟಿಯಿಂದ ಶೌಚಾಲಯ ಬಳಕೆ ಅತ್ಯಂತ ಅವಶ್ಯಕವಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆಗಳು, ಮನೆ-ಮನೆ ಭೇಟಿ, ಮಾಹಿತಿ ಹಂಚಿಕೆ, ಸ್ವಚ್ಛತಾ ಪ್ರತಿಜ್ಞೆ ಹಾಗೂ ಸ್ವಚ್ಛತಾ ಅಭಿಯಾನಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಗ್ರಾಮವನ್ನು ಮಾದರಿ ಸ್ವಚ್ಛ ಗ್ರಾಮವನ್ನಾಗಿ ರೂಪಿಸುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಚಾಣಕ್ಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ.), ಬಾದಾಮಿ ಅಧ್ಯಕ್ಷ ಮುತ್ತಣ್ಣ ಯರಗೊಪ್ಪ ಮಾತನಾಡಿ, ಸ್ವಚ್ಛತೆ ಎನ್ನುವುದು ಆರೋಗ್ಯದ ಮೂಲಾಧಾರ. ಪ್ರತಿಯೊಬ್ಬ ನಾಗರಿಕರು ಶೌಚಾಲಯ ಬಳಕೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಸರ್ಕಾರದ ಸ್ವಚ್ಛತಾ ಯೋಜನೆಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ, ಎಂದು ಹೇಳಿದರು.
ಅವರು ಗ್ರಾಮಸ್ಥರು ಬಯಲು ಶೌಚವನ್ನು ಸಂಪೂರ್ಣವಾಗಿ ತ್ಯಜಿಸಿ, ತಮ್ಮ ಕುಟುಂಬ ಹಾಗೂ ಗ್ರಾಮದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ಬಳಕೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande