ಬಾಗಲಕೋಟೆಯಲ್ಲಿ ವಿವಾಹಿತೆಯ ಶವ ಪತ್ತೆ: ಪ್ರಿಯಕರನಿಂದಲೇ ಕೊಲೆ ಆರೋಪ; ಪೊಲೀಸರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ
ಬಾಗಲಕೋಟೆ, 11 ಜುಲೈ (ಹಿ.ಸ.): ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚುಗಲ್ ಗ್ರಾಮದ ಸಮೀಪದ ಕಬ್ಬಿನ ಹೊಲದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವಿವಾಹಿತೆಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತೀವ್ರ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ಮೃತರನ್ನು ಬದನೂರು ಗ್ರಾಮದ ನಿವಾಸಿ
ಕೊಲೆ


ಬಾಗಲಕೋಟೆ, 11 ಜುಲೈ (ಹಿ.ಸ.):

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚುಗಲ್ ಗ್ರಾಮದ ಸಮೀಪದ ಕಬ್ಬಿನ ಹೊಲದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವಿವಾಹಿತೆಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತೀವ್ರ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ಮೃತರನ್ನು ಬದನೂರು ಗ್ರಾಮದ ನಿವಾಸಿ ಅನುಸೂಯಾ ಲಕ್ಷಣ ರಂಗಣ್ಣವರ (30) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಜುಲೈ 7ರಂದು ಲೋಕಾಪುರ ಪಟ್ಟಣಕ್ಕೆ ಸಂತೆಗೆಂದು ತೆರಳಿದ್ದ ಅನುಸೂಯಾ ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅವರ ಪತಿ ಲೋಕಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ನಾಲ್ಕು ದಿನಗಳ ನಂತರ ವರ್ಚುಗಲ್ ಗ್ರಾಮದ ಸಮೀಪದ ಕಬ್ಬಿನ ಹೊಲದಲ್ಲಿ ಅನುಸೂಯಾ ಅವರ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕೃತ್ಯದ ಹಿಂದೆ ಅನೈತಿಕ ಸಂಬಂಧದ ವಿಚಾರವೇ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಹಲಗಲಿ ಗ್ರಾಮದ ನಿವಾಸಿ ಸೋಮಪ್ಪ ಹಳ್ಳಿ ಎಂಬಾತನ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ, ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಅನುಸೂಯಾ ನಾಪತ್ತೆಯಾದ ದಿನವೇ ಶಂಕಿತ ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಆತನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಅಲ್ಲದೆ, ಬಸ್ ನಿಲ್ದಾಣದಿಂದಲೇ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿರುವ ಕುರಿತು ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ನಾಪತ್ತೆ ಪ್ರಕರಣವಾಗಿ ದಾಖಲಿಸಿ ತಕ್ಷಣದ ಕ್ರಮ ಕೈಗೊಳ್ಳಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶವ ಪತ್ತೆಯಾದ ನಂತರ ಲೋಕಾಪುರ ಪೊಲೀಸ್ ಠಾಣೆಯ ಪಿಎಸ್ಐ ವಿರುದ್ಧ ಮೃತ ಮಹಿಳೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೊಯಲ್, ಡಿವೈಎಸ್ಪಿ ಹಾಗೂ ಸಿಪಿಐ ಸಮ್ಮುಖದಲ್ಲೇ ಕುಟುಂಬಸ್ಥರು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ಮೇಲೂ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಪ್ರಕರಣ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮರಣದ ನಿಖರ ಕಾರಣವು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಘಟನೆಯು ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯರ ಸುರಕ್ಷತೆ ಹಾಗೂ ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಕುರಿತು ಪ್ರಶ್ನೆಗಳು ಎದ್ದಿವೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande