ಲೋಕ ಅದಾಲತ್ ಸದುಪಯೋಗಪಡಿಸಿಕೊಳ್ಳಿ: ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಬಳ್ಳಾರಿ, 11 ಜುಲೈ (ಹಿ.ಸ.): ಆ್ಯಂಕರ್ : ಲೋಕ್ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ ಮತ್ತು ಸೌಹಾರ್ದಯುತ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದ್ದು, ವ್ಯಾಜ್ಯವಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ಹೇಳಿದ್ದಾ
Make good use of Lok Adalat


ಬಳ್ಳಾರಿ, 11 ಜುಲೈ (ಹಿ.ಸ.):

ಆ್ಯಂಕರ್ : ಲೋಕ್ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ ಮತ್ತು ಸೌಹಾರ್ದಯುತ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದ್ದು, ವ್ಯಾಜ್ಯವಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ಹೇಳಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯದ ಒಂದನೇ ಮಹಡಿಯ ವಿಡಿಯೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಯ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ವೇದಿಕೆಯಾಗಿ ಹೊರಹೊಮ್ಮಿರುವ ರಾಷ್ಟ್ರೀಯ ಲೋಕ ಅದಾಲತ್ ದೇಶಾದ್ಯಂತ ನಡೆಯುತ್ತಿದೆ. ಎಲ್ಲರಿಗೂ ನ್ಯಾಯ, ಶೀಘ್ರ ನ್ಯಾಯ ಮತ್ತು ಉಚಿತ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ವ್ಯವಸ್ಥೆಯು ಕಕ್ಷಿದಾರರಿಗೆ ಸುದೀರ್ಘ ಕೋರ್ಟ್ ಪ್ರಕ್ರಿಯೆಗಳಿಂದ ಮುಕ್ತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಾಮಾನ್ಯ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ನಡೆಯುವ ಪ್ರಕರಣಗಳಿಗೆ ಅದಾಲತ್ ನಲ್ಲಿ ಸುದೀರ್ಘ ವಾದ-ಪ್ರತಿವಾದಗಳಿಲ್ಲದೆ, ಉಭಯ ಪಕ್ಷಕಾರರ ಪರಸ್ಪರ ಒಪ್ಪಂದದೊಂದಿಗೆ ಒಂದೇ ದಿನದಲ್ಲಿ ಅತ್ಯಂತ ವೇಗವಾಗಿ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.

ರಾಜಿಯಾಗಬಲ್ಲ ಕ್ರಿಮಿನಲ್ ಮೊಕದ್ದಮೆಗಳು, ಸಿವಿಲ್ ದಾವೆಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ವಿಮೆ ಪ್ರಕರಣಗಳು, ಕೌಟುಂಬಿಕ ಕಲಹಗಳು ಹಾಗೂ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಇಂದಿನ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 36,188 ಬಾಕಿ ಇರುವ ಪ್ರಕರಣಗಳ ಪೈಕಿ, 8,882 ಪ್ರಕರಣಗಳನ್ನು ಲೋಕ ಅದಾಲತ್ಗೆ ಉಲ್ಲೇಖಿಸಲಾಗಿದ್ದು, ಇದರಲ್ಲಿ 4,957 ಪ್ರಕರಣಗಳು ಸೌಹಾರ್ದಯುತ ರಾಜಿಗೆ ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಎ ಮೋಹನ್ ಅವರು ಮಾತನಾಡಿ, ಲೋಕ ಅದಾಲತ್ಗೆ ಯಾವುದೇ ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಈಗಾಗಲೇ ಪಾವತಿಸಲಾದ ಕೋರ್ಟ್ ಫೀ ಇದ್ದಲ್ಲಿ, ಪ್ರಕರಣ ರಾಜಿಯಾದ ನಂತರ ಸಂಪೂರ್ಣ ಶುಲ್ಕವನ್ನು ಪಕ್ಷಕಾರರಿಗೆ ಮರುಪಾವತಿಸಲಾಗುತ್ತದೆ. ಲೋಕ ಅದಾಲತ್ ನೀಡುವ ತೀರ್ಪು ಸಿವಿಲ್ ನ್ಯಾಯಾಲಯದ ತೀರ್ಪಿಗೆ ಸಮನಾಗಿರುತ್ತದೆ. ಇದರ ವಿರುದ್ಧ ಯಾವುದೇ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಇದರಿಂದ ಪ್ರಕರಣಕ್ಕೆ ಅಲ್ಲಿಗೇ ಶಾಶ್ವತ ಮುಕ್ತಿ ಸಿಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಮತ್ತು ಸಾಮಾನ್ಯ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಮಾತನಾಡಿ, ಲೋಕ್ ಅದಾಲತ್ ನಲ್ಲಿ ಯಾರದೇ ಸೋಲು-ಗೆಲುವಿರುವುದಿಲ್ಲ. ಇಬ್ಬರೂ ಒಟ್ಟಿಗೆ ಕುಳಿತು ಸಂಧಾನ ಮಾಡಿಕೊಳ್ಳುವುದರಿಂದ ಇಬ್ಬರಿಗೂ ಜಯ ಸಿಗುತ್ತದೆ. ಇದು ಸಮಾಜ ಮತ್ತು ಕುಟುಂಬಗಳಲ್ಲಿ ಸೌಹಾರ್ದತೆಯನ್ನು ಕಾಪಾಡಲು ನೆರವಾಗುತ್ತದೆ. ಇಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ಅಥವಾ ಸಾಕ್ಷ್ಯ ಕಾಯ್ದೆಯಂತಹ ಕಠಿಣ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ. ಪಕ್ಷಕಾರರು ಯಾವುದೇ ಭಯವಿಲ್ಲದೆ ನೇರವಾಗಿ ಸಂಧಾನಕಾರರೊಂದಿಗೆ ಮುಕ್ತವಾಗಿ ಮಾತನಾಡಬಹುದು ಎಂದು ಅವರು ವಿವರಿಸಿದರು.

ಈ ವೇಳೆ ಜಿಲ್ಲಾ ನ್ಯಾಯಾಲಯದ ಅಧಿಕಾರಿ- ಸಿಬ್ಬಂದಿ ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande