






ಬಳ್ಳಾರಿ, 11 ಜುಲೈ (ಹಿ.ಸ.):
ಆ್ಯಂಕರ್ : ಕೆಲಸದ ಒತ್ತಡ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕಾರಣ ಯುವಶಕ್ತಿಯಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದ್ದು, ಮಾಧ್ಯಮಗಳ ಪ್ರತಿನಿಧಿಗಳು ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಲಿಡ್ಕರ್ ಅಧ್ಯಕ್ಷರಾಗಿರುವ ಮುಂಡ್ರಗಿ ನಾಗರಾಜ್ ಅವರು ಕರೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ನಡೆದ `ಕಾರ್ಯನಿರತ ಪತ್ರಕರ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರ'ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸದಾಕಾಲ ಕೆಲಸದ ಒತ್ತಡ, ಕಾರ್ಯಗಳ ಯೋಜನೆ ರೂಪಿಸುವಲ್ಲಿ ಇರುವ ಮಾಧ್ಯಮ ಮನೆಗಳ ಪ್ರತಿನಿಧಗಳು ವೈಯಕ್ತಿಕ ಆರೋಗ್ಯ, ಕುಟುಂಬದ ಸದಸ್ಯರ ಒಳಿತುಗಳ ಕುರಿತು ನಿರ್ಲಕ್ಷ್ಯ ಹೊಂದುವುದು ಸಹಜ. ಇನ್ನುಮುಂದೆ ಪ್ರತಿಯೊಬ್ಬರೂ ಮೂರು ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಆರೋಗ್ಯವಂತರಾಗಿ ಇರಬೇಕು ಎಂದು ಅವರು ಹೇಳಿದರು.
ಸುದ್ದಿಗಾರರು ಏಕ ಮುಖ ವರದಿಗಳನ್ನು ಪ್ರಕಟಿಸುವುದಕ್ಕಿಂತ, ಸುದ್ದಿಯ ಹಿಂದಿನ ಅಥವಾ ಕೇಂದ್ರಿತ ವ್ಯಕ್ತಿಯ ಸ್ಪಷ್ಟನೆಯ ಜೊತೆಯಲ್ಲಿ ಸುದ್ದಿಯನ್ನು ಪ್ರಕಟಿಸಿದಲ್ಲಿ ವೃತ್ತಿಪರತೆಯನ್ನು ಪಾಲಿಸಿದಂತೆ ಆಗಲಿದೆ. ಕಾರಣ ಪ್ರತಿಯೊಬ್ಬ ಪತ್ರಕರ್ತರು ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎನ್. ಬಸಾರೆಡ್ಡಿ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಆರೋಗ್ಯವಾಗಿದ್ದರೆ ಸಮಾಜವೂ ಆರೋಗ್ಯದಿಂದ ಇರುತ್ತದೆ. ರೋಗದ ಗುಣ ಲಕ್ಷಣಗಳನ್ನು ಆರಂಭದಲ್ಲಿ ಕಂಡುಕೊಂಡರೆ ಅದಕ್ಕೆ ಸೂಕ್ತ ಚಿಕಿತ್ಸೆ ತಕ್ಷಣವೇ ಸಿಕ್ಕಲ್ಲಿ ಆರೋಗ್ಯ ಪಡೆಯಲು ಸಾಧ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಅವರು, ಸ್ವಾಗತಿಸಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ, ಪತ್ರಕರ್ತರ ಕಲ್ಯಾಣ ಇನ್ನಿತರೆಗಳನ್ನು ವಿವರಿಸಿದರು.
ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆ:
ಬಳ್ಳಾರಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್ ಅವರು 51 ಸಾವಿರ ರುಪಾಯಿಗಳ ಚೆಕ್ ಅನ್ನು ದೇಣಿಗೆಯಾಗಿ ನೀಡಿದರು.
ಬಳ್ಳಾರಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 11 ಸಾವಿರ ರೂ ದೇಣಿಗೆ ನೀಡಿದರು.
ಬಳ್ಳಾರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಲ್ಲಾ ರಮೇಶಬಾಬು, ವಾರ್ತಾ ಸಹಾಯಕ ವಿ.ಸಿ. ಗುರುರಾಜ್,ಸಂಘದ ಉಪಾಧ್ಯಕ್ಷ. ಎನ್. ಗುರುಶಾಂತ, ಖಜಾಂಚಿ ಕೆ. ಅಶೋಕ್, ಕಾರ್ಯದರ್ಶಿ ಎಂ.ಇ. ಜೋಷಿ,ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್. ಕಿನೂರೇಶ್ವರ, ಹಂದ್ಯಾಳ್ ಪುರುಷೋತ್ತಮ, ನಂದೀಶ್ ಕುಮಾರ್ ಅವರು ವೇದಿಕೆಯಲ್ಲಿದ್ದರು. ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತ, ಹೃದಯ, ಕಿಡ್ನಿ, ಕಣ್ಣು, ಕಿವಿ, ಗಂಟಲು, ಮಾನಸಿಕ ಆರೋಗ್ಯ ಇನ್ನಿತರೆಗಳ ತಪಾಸಣೆ ನಡೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್