
ಆಕ್ಲ್ಯಾಂಡ್, 11 ಜುಲೈ (ಹಿ.ಸ.):
ಆ್ಯಂಕರ್:
ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕೈಗಾರಿಕೆ, ರೈತರು ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ಭದ್ರ ಅಡಿಪಾಯ ಹಾಕಲಿದೆ ಎಂದು ತಿಳಿಸಿದರು.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಆಯೋಜಿಸಿದ್ದ ರಾಜ್ಯ ಭೋಜನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಮಾರು 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಅಧಿಕೃತ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಹೇಳಿದರು. ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಲಕ್ಸನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಭಾರತ ಮತ್ತು ನ್ಯೂಜಿಲೆಂಡ್ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಒಂದೇ ರೀತಿಯ ನಂಬಿಕೆ ಹೊಂದಿರುವ ಸಹಜ ಪಾಲುದಾರರು ಎಂದು ಹೇಳಿದ ಮೋದಿ, ಕಳೆದ ಮೂರು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ಶೇ.50ಕ್ಕೂ ಹೆಚ್ಚು ಏರಿಕೆಯಾಗಿದೆ ಎಂದರು.
ಈ ವರ್ಷ ದಾಖಲೆ ಅವಧಿಯಲ್ಲಿ ಪೂರ್ಣಗೊಂಡ ಎಫ್‌ಟಿಎ ಮೂಲಕ ವ್ಯಾಪಾರ, ಹೂಡಿಕೆ, ಕೃಷಿ, ಹೈನುಗಾರಿಕೆ, ಆಹಾರ ಸಂಸ್ಕರಣೆ ಹಾಗೂ ಯುವಜನರಿಗೆ ಹೊಸ ಅವಕಾಶಗಳು ದೊರೆಯಲಿದ್ದು, ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ನೆರವಾಗಲಿದೆ ಎಂದು ಹೇಳಿದರು.
ಭಾರತದ ಯುಪಿಐ ಮತ್ತು ನ್ಯೂಜಿಲೆಂಡ್‌ನ ಪಾವತಿ ವ್ಯವಸ್ಥೆಯನ್ನು ಪರಸ್ಪರ ಸಂಪರ್ಕಿಸುವ ದಿಕ್ಕಿನಲ್ಲಿ ಕಾರ್ಯ ನಡೆಯಲಿದ್ದು, ಕೃಷಿ, ಹೈನುಗಾರಿಕೆ ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು.
ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಆರೋಗ್ಯ ಸಹಕಾರವನ್ನು ವಿಸ್ತರಿಸುವುದು, ಹಿಂದೂ-ಪ್ರಶಾಂತ ಪ್ರದೇಶದಲ್ಲಿ ನೌಕಾ ಸಹಕಾರ, ಜಂಟಿ ನೌಕಾ ಅಭ್ಯಾಸ, ಲಾಜಿಸ್ಟಿಕ್ ಸಹಕಾರ ಹಾಗೂ ಹೈಡ್ರೋಗ್ರಫಿ ಕ್ಷೇತ್ರಗಳಲ್ಲಿ ಸಮನ್ವಯ ಹೆಚ್ಚಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿದರು.
ಸಾಂಸ್ಕೃತಿಕ ಸಹಕಾರ ಒಪ್ಪಂದದ ಮೂಲಕ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸೃಜನಾತ್ಮಕ ಕೈಗಾರಿಕೆಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ನ್ಯೂಜಿಲೆಂಡ್‌ನ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಪ್ರಧಾನಿ ಮೋದಿ ಆಹ್ವಾನ ನೀಡಿದರು.
ಈ ವರ್ಷ ಭಾರತ–ನ್ಯೂಜಿಲೆಂಡ್ ಕ್ರೀಡಾ ಸಂಬಂಧಗಳ ಶತಮಾನೋತ್ಸವ ಆಚರಿಸಲಾಗುತ್ತಿದ್ದು, ಮೇಜರ್ ಧ್ಯಾನಚಂದ್ ನೇತೃತ್ವದ ಭಾರತೀಯ ಹಾಕಿ ತಂಡದ ಐತಿಹಾಸಿಕ ಸಾಧನೆಯನ್ನು ಸ್ಮರಿಸಿ ಹಲವು ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳಲ್ಲಿಯೂ ಸಹಕಾರ ವಿಸ್ತರಿಸಲು ಜಂಟಿ ಕ್ರೀಡಾ ಕಾರ್ಯಯೋಜನೆಗೂ ಉಭಯ ದೇಶಗಳು ಒಪ್ಪಿಗೆ ನೀಡಿವೆ.
ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿರುವ ಭಾರತ ಮತ್ತು ನ್ಯೂಜಿಲೆಂಡ್, ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಬೆಂಬಲ ವ್ಯಕ್ತಪಡಿಸಿವೆ. ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಬಲಪಡಿಸಲು ಜಂಟಿ ಕಾರ್ಯಪಡೆ ರಚನೆಗೂ ಒಪ್ಪಿಗೆ ನೀಡಲಾಗಿದ್ದು, ಹಿಂದೂ-ಪ್ರಶಾಂತ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆ ಕಾಪಾಡುವಲ್ಲಿ ಉಭಯ ದೇಶಗಳ ಸಹಕಾರ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.