
ನವದೆಹಲಿ, 10 ಜುಲೈ (ಹಿ.ಸ.):
ಆ್ಯಂಕರ್:
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ 75ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದು, ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಅವರು ಬಲಿಷ್ಠ ಹಾಗೂ ಸುರಕ್ಷಿತ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿನ ಅವರ ಅನುಭವ ದೇಶಕ್ಕೆ ಅಮೂಲ್ಯವಾಗಿದೆ ಎಂದು ಹೇಳಿದ್ದಾರೆ. ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ರಾಷ್ಟ್ರಸೇವೆಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಹಾರೈಸಿದ್ದಾರೆ.
2019ರ ಮೇ ತಿಂಗಳಿನಿಂದ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಅವರ ಅವಧಿಯಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ವೇಗ ಸಿಕ್ಕಿದ್ದು, ಸ್ವದೇಶಿ ರಕ್ಷಣಾ ಉತ್ಪಾದನೆಗೆ ಉತ್ತೇಜನ, ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಹಾಗೂ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಗಿದೆ.
ರಾಜನಾಥ್ ಸಿಂಗ್ ಅವರು ಈ ಹಿಂದೆ ಕೇಂದ್ರ ಗೃಹ ಸಚಿವರು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಕೇಂದ್ರ ಕೃಷಿ ಸಚಿವರು, ಕೇಂದ್ರ ಭೂಸಾರಿಗೆ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಲಖನೌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜನಾಥ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸಚಿವ ಸಂಪುಟದ ಸದಸ್ಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಶುಭಾಶಯಗಳನ್ನು ಸಲ್ಲಿಸಿ, ರಾಷ್ಟ್ರೀಯ ಭದ್ರತೆ, ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.