
ಶಿಮ್ಲಾ, 10 ಜುಲೈ (ಹಿ.ಸ.):
ಆ್ಯಂಕರ್:
ವಂದೇ ಮಾತರಂ ದೇಶಭಕ್ತಿಯನ್ನು ಪವಿತ್ರ ರಾಷ್ಟ್ರೀಯ ಕರ್ತವ್ಯವಾಗಿ ರೂಪಿಸಿದ ಗೀತೆ ಆಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಸಂಖ್ಯಾತ ಹೋರಾಟಗಾರರಿಗೆ ಧೈರ್ಯ, ತ್ಯಾಗ ಮತ್ತು ಆಶೆಯ ಪ್ರೇರಣೆಯಾಯಿತು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಶಿಮ್ಲಾದ ಭಾರತೀಯ ಉನ್ನತ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ‘ವಂದೇ ಮಾತರಂನ ಪಯಣ’ ಶಾಶ್ವತ ಪ್ರದರ್ಶನದ ಉದ್ಘಾಟನೆ ಹಾಗೂ ‘ಸರ್ದಾರ್ ಪಟೇಲ್ ಅವರ ದೃಷ್ಟಿಕೋನ: ಏಕೀಕರಣ, ಐಕ್ಯತೆ ಮತ್ತು ಸಂಘೀಯ ವ್ಯವಸ್ಥೆ’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವನ್ನು ಅವರು ಆನ್‌ಲೈನ್ ಮೂಲಕ ಉದ್ದೇಶಿಸಿ ಮಾತನಾಡಿದರು.
ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಚೇತನೆಯ ಸಂಕೇತವಾಗಿದೆ. ಈ ಗೀತೆ ದೇಶಭಕ್ತಿಯ ಭಾವನೆಯನ್ನು ಜನಮಾನಸಕ್ಕೆ ತಲುಪಿಸಿ, ಸ್ವಾತಂತ್ರ್ಯ ಚಳವಳಿಗೆ ಹೊಸ ಶಕ್ತಿ ತುಂಬಿತು. ಇಂದಿಗೂ ರಾಷ್ಟ್ರದ ಮೇಲಿನ ಸಮರ್ಪಣೆ, ಆತ್ಮಗೌರವ ಮತ್ತು ರಾಷ್ಟ್ರೀಯ ಏಕತೆಗೆ ಇದು ಪ್ರೇರಣೆಯ ಮೂಲವಾಗಿದೆ ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಮನ ಸಲ್ಲಿಸಿದ ಉಪರಾಷ್ಟ್ರಪತಿ, ಅವರು ಸಂಸ್ಥಾನಗಳನ್ನು ಮಾತ್ರವಲ್ಲದೆ ದೇಶದ ಜನರ ಹೃದಯಗಳನ್ನೂ ಏಕೀಕರಿಸಿದರು. ಒಂದೇ ರಾಷ್ಟ್ರ, ಒಂದೇ ಸಂವಿಧಾನ ಮತ್ತು ಸಾಮೂಹಿಕ ರಾಷ್ಟ್ರೀಯ ಭವಿಷ್ಯದ ಭದ್ರ ಅಡಿಪಾಯವನ್ನು ಹಾಕಿದ ಮಹಾನ್ ನಾಯಕರು ಎಂದು ಶ್ಲಾಘಿಸಿದರು.
ನಿಜವಾದ ದೇಶಭಕ್ತಿ ಮಾತುಗಳಲ್ಲಿ ಮಾತ್ರ ಸೀಮಿತವಾಗದೆ, ಪ್ರಾಮಾಣಿಕತೆ, ಉತ್ತಮ ಕಾರ್ಯಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆಗೆ ಸಮರ್ಪಿತ ಜೀವನಶೈಲಿಯಲ್ಲಿ ಪ್ರತಿದಿನವೂ ಪ್ರತಿಫಲಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ‘ವಂದೇ ಮಾತರಂನ ಪಯಣ’ ಕುರಿತ ಶಾಶ್ವತ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಜೊತೆಗೆ, ಸರ್ದಾರ್ ಪಟೇಲ್ ಅವರ ರಾಷ್ಟ್ರ ಏಕೀಕರಣ, ರಾಷ್ಟ್ರೀಯ ಐಕ್ಯತೆ ಹಾಗೂ ಭಾರತೀಯ ಸಂಘೀಯ ವ್ಯವಸ್ಥೆಯ ಕುರಿತ ದೃಷ್ಟಿಕೋನವನ್ನು ಆಧರಿಸಿದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೂ ಚಾಲನೆ ನೀಡಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.