
ನವದೆಹಲಿ, 10 ಜುಲೈ (ಹಿ.ಸ.):
ಆ್ಯಂಕರ್:
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 13ರಂದು ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಸಲ್ಲಿಸಿರುವ ಅರ್ಜಿಯಲ್ಲಿ, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಣಕಾಸು ಅಕ್ರಮಗಳನ್ನು ತಡೆಯಲು ಪಾರದರ್ಶಕ ವ್ಯವಸ್ಥೆ ರೂಪಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ, ದೇಣಿಗೆ ಹಣ ಕಳುವಾಗಿದೆ ಎಂಬ ಸುದ್ದಿ ಸತ್ಯವಾಗಿರಲಿ ಅಥವಾ ಸುಳ್ಳಾಗಿರಲಿ, ಇಂತಹ ವರದಿಗಳು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿವೆ ಎಂದು ಉಲ್ಲೇಖಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿ ಯಾವುದೇ ಎಫ್‌ಐಆರ್ ದಾಖಲಿಸದೆ ತನಿಖೆ ಆರಂಭಿಸಿರುವುದನ್ನೂ ಪ್ರಶ್ನಿಸಲಾಗಿದೆ.
ಟ್ರಸ್ಟ್‌ಗೆ ಸಂಬಂಧಿಸಿದಂತೆ ಕಾಣೆಯಾಗಿರುವ ಹಣ ಹಾಗೂ ಇತರ ಹಣಕಾಸು ಅಕ್ರಮಗಳ ಕುರಿತು ಸ್ವತಂತ್ರ ಮತ್ತು ಪರಿಣತಿ ಹೊಂದಿರುವ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಮೂರು ಸದಸ್ಯರ ಎಸ್‌ಐಟಿಯಲ್ಲಿ ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ ರತನ್ ಸದಸ್ಯರಾಗಿದ್ದಾರೆ.
ಇದಕ್ಕೂ ಮುನ್ನ ವಕೀಲ ಅನೂಪ್ ಅವಸ್ಥಿ ಅವರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿದ್ದರು. ರಾಮ ಮಂದಿರದ ದೇಣಿಗೆ ಹಣದಲ್ಲಿ ಭಾರಿ ಹಣಕಾಸು ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಕೆಲ ಮಾಜಿ ಸಿಬ್ಬಂದಿ ಹಾಗೂ ಶಂಕಿತರ ಬಳಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.